ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗ 200+ ರನ್ ಹೊಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಐಪಿಎಲ್ 2023 ರಲ್ಲಿ ಶುಕ್ರವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯದಲ್ಲಿ ಕೂಡ ಉಭಯ ತಂಡಗಳು 200 ಕ್ಕೂ ಅಧಿಕ ರನ್ ಕಲೆಹಾಕಿದವು.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆ್ಯಡಂ ಮರ್ಕ್ರಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ 23 ರನ್ಗಳಿಂದ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಏಳನೇ ಸ್ಥಾನಕ್ಕೇರಿದೆ.
ಟಾಸ್ ಗೆದ್ದ ಕೆಕೆಆರ್ ತಂಡ, ಹೈದರಾಬಾದ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿತು. ಅದರಂತೆ, ಓಪನರ್ ಬಂದು, ಕೊನೆಯವರೆಗೆ ಬ್ಯಾಟ್ ಮಾಡಿದ ಹ್ಯಾರಿ ಬ್ರೂಕ್ 55 ಎಸೆತಗಳಲ್ಲಿ 12 ಫೋರ್, 3 ಸಿಕ್ಸರ್ನೊಂದಿಗೆ 100 ರನ್ ಗಳಿಸಿ ಮಿಂಚಿದರು.
ಐದನೇ ಕ್ರಮಾಂಕದಲ್ಲಿ ಬಂದ ನಾಯಕ ಆ್ಯಡಂ ಮರ್ಕ್ರಮ್ 26 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಗಳಿಕೆಯಲ್ಲಿ ಬ್ರೂಕ್‌ಗೆ ಜತೆಯಾದರು. ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ 32 ರನ್ ಚಚ್ಚಿದರು. ಅಂತಿಮವಾಗಿ ಸನ್‌ರೈಸರ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದೊಂದಿಗೆ 228ರನ್ ಪೇರಿಸಿದೆ.
ಕಠಿಣ ಗುರಿ ಬೆನ್ನಟ್ಟಿದ ಕೆಕೆಆರ್ ಉತ್ತಮ ಆರಂಭ ಪಡೆಯಲಿಲ್ಲ. ರೆಹಮಾನುಲ್ಲಾ ಗುರ್ಬಾಜ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ ಮಾರ್ಕ್ ಜಾನ್ಸೆನ್ ಸತತ ಎರಡು ಎಸತೆಗಳಲ್ಲಿ ವೆಂಕಟೇಶ್ ಅಯ್ಯರ್ (10) ಮತ್ತು ಸುನಿಲ್ ನರೈನ್ (0) ವಿಕೆಟ್ ಉರುಳಿಸಿದರು.
ಜಗದೀಸನ್ ಜೊತೆಗೂಡಿದ ನಾಯಕ ನಿತೀಶ್ ರಾಣಾ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಜಗದೀಸನ್ 21 ಎಸತೆಗಳಲ್ಲಿ 5 ಫೋರ್, 1 ಸಿಕ್ಸರ್ನೊಂದಿಗೆ 36 ಬಾರಿಸಿದರು. ಇಂಜುರಿಗೆ ತುತ್ತಾಗಿದ್ದ ಆಂಡ್ರೆ ರಸೆಲ್ 3 ರನ್ಗಳಿಗೆ ಬ್ಯಾಟ್ ಕೆಳಗಿಟ್ಟರು.
ಬಳಿಕ ರಾಣಾ ಜೊತೆಗೂಡಿದ ರಿಂಕು ಸಿಂಗ್ ತಂಡದ ಗೆಲುವಿಗಾಗಿ ಕೊನೆಯವರೆಗೆ ಹೋರಾಟ ನಡೆಸಿದರು. 6ನೇ ವಿಕೆಟ್ಗೆ ರಾಣಾ ಮತ್ತು ರಿಂಕು 69 ರನ್ಗಳನ್ನು ಬಾರಿಸಿದರು. 41 ಎಸೆತಗಳಲ್ಲಿ ರಾಣಾ 6 ಸಿಕ್ಸರ್ಗಳು ಮತ್ತು 5 ಫೋರ್ ಸಿಡಿಸಿ 75 ರನ್ ಗಳಿಸಿ ನಿರ್ಗಮಿಸಿದರು.
ಇತ್ತ ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರಿಂಕು ಸಿಂಗ್ ಕುಗ್ಗದೆ ಬ್ಯಾಟ್ ಬೀಸಿದರು. ಕೊನೆಯ ಓವರ್ಗೆ 32 ರನ್ಗಳ ಅಗತ್ಯವಿತ್ತು. ಆದರೆ, ಗೆಲವು ತಂದುಕೊಡಲು ಸಾಧ್ಯವಾಗಲಿಲ್ಲ. ತಲಾ ನಾಲ್ಕು ಸಿಕ್ಸರ್ಗಳ ಮತ್ತು ಬೌಂಡರಿಗಳೊಂದಿಗೆ ಅಜೇಯ 58 ಸಿಡಿಸಿದರು.
ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲು ಕಂಡಿತು. ಎಸ್ಆರ್ಹೆಚ್ ಪರ ಮಾರ್ಕ್ ಜಾನ್ಸೆನ್ ಮತ್ತು ಮಯಾಂಕ್ ಮಾರ್ಕಂಡೆ ತಲಾ 2 ವಿಕೆಟ್ ಕಿತ್ತರು.
Published On - 8:03 am, Sat, 15 April 23