
ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯ ಓವಲ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ನಾಲ್ಕು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಗಾಯಗೊಂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಬದಲಿಗೆ ಧ್ರುವ್ ಜುರೆಲ್‌ಗೆ ಅವಕಾಶ ಸಿಕ್ಕಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬದಲಿಗೆ ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್ ಬದಲಿಗೆ ಕರುಣ್ ನಾಯರ್, ಅನ್ಶುಲ್ ಕಾಂಬೋಜ್ ಬದಲಿಗೆ ಆಕಾಶ್ ದೀಪ್ಗೆ ಅವಕಾಶ ನೀಡಲಾಗಿದೆ.

ಕನ್ನಡಿಗ ಕರುಣ್ ನಾಯರ್ಗೆ ಕೊನೆಯ ಅವಕಾಶ ಸಿಕ್ಕಿದೆ. ಇಡೀ ಸರಣಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕರುಣ್ರನ್ನು 4ನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿತ್ತು. ಇದೀಗ ಶಾರ್ದೂಲ್ ಠಾಕೂರ್ ಬದಲಿಗೆ ಕರುಣ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹೀಗಾಗಿ ತನ್ನ ವೃತ್ತಿಜೀವನದ ಉಳಿವಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿರುವ ಓವಲ್ ಟೆಸ್ಟ್ ಪಂದ್ಯದಲ್ಲಿ ಕರುಣ್ ಮಿಂಚಲೇ ಬೇಕಾಗಿದೆ.

ಕೆಲಸದ ಹೊಣೆ ನಿರ್ಣಹಣೆಯ ಕಾರಣ ನೀಡಿ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಪ್ರಸಿದ್ಧ್ ಕೃಷ್ಣ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಲಾಗಿದೆ. ಪ್ರಸಿದ್ಧ್ ಕೂಡ ಇಡೀ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಅವರನ್ನು ಸಹ ತಂಡದಿಂದ ಕೈಬಿಡಲಾಗಿತ್ತು. ಆದರೀಗ ಕೊನೆಯ ಟೆಸ್ಟ್ನಲ್ಲಿ ಪ್ರಸಿದ್ಧ್‌ಗೆ ಕೊನೆಯ ಅವಕಾಶ ನೀಡಲಾಗಿದೆ.

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಗಾಯಗೊಂಡಿರುವುದರಿಂದ ಅವರನ್ನು ಕೊನೆಯ ಟೆಸ್ಟ್ನಿಂದ ಹೊರಗಿಡಲಾಗಿದೆ. ಹೀಗಾಗಿ ಧ್ರುವ್ ಜುರೆಲ್‌ಗೆ ಅವಕಾಶ ಸಿಕ್ಕಿದೆ. ಈ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಉತ್ತಮ ಫಾರ್ಮ್‌ನಲ್ಲಿದ್ದರು, ಆದರೆ ಗಾಯದಿಂದಾಗಿ ಅವರು ತಂಡದಿಂದ ಹೊರಗುಳಿದಿದ್ದಾರೆ. ಈಗ ತಂಡದಲ್ಲಿ ಸ್ಥಾನ ಪಡೆದಿರುವ ಧ್ರುವ್ ಜುರೆಲ್ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ.

ಇಡೀ ಸರಣಿಯಲ್ಲಿ ಒಂದೇ ಒಂದು ಅವಕಾಶ ಪಡೆಯದ ಕೆಲವೇ ಕೆಲವು ಆಟಗಾರರಲ್ಲಿ ಕುಲ್ದೀಪ್ ಕೂಡ ಒಬ್ಬರು. ಪ್ರಮುಖ ಸ್ಪಿನ್ನರ್ ಆಗಿ ತಂಡದೊಂದಿಗೆ ಇಂಗ್ಲೆಂಡ್ಗೆ ಬಂದಿದ್ದ ಕುಲ್ದೀಪ್ ಬೆಂಚ್ ಕಾಯುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯವಾಗಲಿಲ್ಲ. ಇವರೊಂದಿಗೆ ಅಭಿಮನ್ಯು ಈಶ್ವರನ್, ಅರ್ಷದೀಪ್ ಸಿಂಗ್ ಕೂಡ ಅವಕಾಶ ಸಿಗದೆ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಯಿತು.

ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಕರುಣ್ ನಾಯರ್, ಕೆಎಲ್ ರಾಹುಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.