
ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ಬರೆದಿರುವುದು ಪಾರ್ಲ್ ರಾಯಲ್ಸ್ ತಂಡ. ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್ಎಟಿ20 ಲೀಗ್ನಲ್ಲಿ 5 ಸ್ಪಿನ್ನರ್ಗಳಿಂದ 20 ಓವರ್ ಬೌಲಿಂಗ್ ಮಾಡಿಸಿ ಪಾರ್ಲ್ ರಾಯಲ್ಸ್ ಈ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಬೋಲ್ಯಾಂಡ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾರ್ಲ್ ರಾಯಲ್ಸ್ ಹಾಗೂ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ನಾಯಕ ರೈಲಿ ರೊಸ್ಸೊವ್ ಬೌಲಿಂಗ್ ಆಯ್ದುಕೊಂಡರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಪಾರ್ಲ್ ರಾಯಲ್ಸ್ ಪರ ಜೋ ರೂಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ರನ್ಗಳಿಸಲು ಕಷ್ಟಕರವಾಗಿದ್ದ ಪಿಚ್ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ರೂಟ್ 56 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 78 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಪಾರ್ಲ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 140 ರನ್ ಕಲೆಹಾಕಿತು.

141 ರನ್ಗಳ ಸುಲಭ ಗುರಿ ಬೆನ್ನತ್ತಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ವಿರುದ್ಧ ಪಾರ್ಲ್ ರಾಯಲ್ಸ್ ಸ್ಪಿನ್ ಅಸ್ತ್ರ ಪ್ರಯೋಗಿಸಿದರು. ಪಿಚ್ ಸ್ಪಿನ್ ಸ್ನೇಹಿ ಎಂಬುದನ್ನು ಅರಿತುಕೊಂಡ ನಾಯಕ ಡೇವಿಡ್ ಮಿಲ್ಲರ್ ಐವರು ಸ್ಪಿನ್ನರ್ಗಳನ್ನು ಬಳಸಿಕೊಂಡು 20 ಓವರ್ ಪೂರೈಸಿದರು.

ಪಾರ್ಲ್ ರಾಯಲ್ಸ್ ಪರ ಸ್ಪಿನ್ ಮೋಡಿ ಮಾಡಿದ ಜಾರ್ನ್ ಫಾರ್ಚುಯಿನ್ 4 ಓವರ್ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರೆ, ದುನಿತ್ ವೆಲ್ಲಲಾಗೆ 4 ಓವರ್ಗಳಲ್ಲಿ 16 ರನ್ ನೀಡಿ 1 ವಿಕೆಟ್ ಕಬಳಿಸಿದರು. ಇನ್ನು ಮುಜೀಬ್ ಉರ್ ರೆಹಮಾನ್ 4 ಓವರ್ಗಳಲ್ಲಿ 17 ರನ್ ನೀಡಿ 2 ವಿಕೆಟ್ ಉರುಳಿಸಿದರು.

ಎನ್. ಪೀಟರ್ 4 ಓವರ್ ಎಸೆದರೆ, ಜೋ ರೂಟ್ 4 ಓವರ್ಗಳಲ್ಲಿ 2 ವಿಕೆಟ್ ಕಬಳಿಸಿದರು. ಈ ಸ್ಪಿನ್ ಅಸ್ತ್ರಗಳ ಮುಂದೆ ರನ್ಗಳಿಸಲು ಪರದಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 129 ರನ್ಗಳಿಸಿ, 11 ರನ್ಗಳಿಂದ ಸೋಲೊಪ್ಪಿಕೊಂಡಿತು.

ಇದರೊಂದಿಗೆ ಫ್ರಾಂಚೈಸಿ ಲೀಗ್ ಟಿ20 ಕ್ರಿಕೆಟ್ನಲ್ಲಿ ಸ್ಪಿನ್ನರ್ಗಳಿಂದಲೇ 20 ಓವರ್ಗಳನ್ನು ಮಾಡಿಸಿದ ಮೊದಲ ತಂಡವೆಂಬ ವಿಶ್ವ ದಾಖಲೆ ಪಾರ್ಲ್ ರಾಯಲ್ಸ್ ಪಾಲಾಯಿತು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅಪರೂಪದ ದಾಖಲೆಯೊಂದನ್ನು ಬರೆಯುವಲ್ಲಿ ಡೇವಿಡ್ ಮಿಲ್ಲರ್ ಮುಂದಾಳತ್ವದ ಪಾರ್ಲ್ ರಾಯಲ್ಸ್ ಯಶಸ್ವಿಯಾಗಿದೆ.