
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 448 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಪಾಕಿಸ್ತಾನದ ತಂಡದ ಅತ್ಯಂತ ಕಳಪೆಯ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದರಿಂದ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿತು. ತಂಡದ ಪರ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕದ ಇನ್ನಿಂಗ್ಸ್ ಆಡಿದರು.

ಮಧ್ಯಮ ಕ್ರಮಾಂಕದಲ್ಲಿ ಪಾಕ್ ತಂಡದ ಇನ್ನಿಂಗ್ಸ್ ನಿಭಾಯಿಸಿದ ಸೌದ್ ಶಕೀಲ್ 261 ಎಸೆತಗಳಲ್ಲಿ 9 ಬೌಂಡರಿ ಸಹಿತ 141 ಬಾರಿಸಿ ವಿಕೆಟ್ ಒಪ್ಪಿಸಿದರೆ, ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ 239 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 171 ರನ್ ಬಾರಿಸಿದರು.

ವಾಸ್ತವವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ರಿಜ್ವಾನ್ಗೆ ದ್ವಿಶತಕ ಸಿಡಿಸುವ ಅವಕಾಶವಿತ್ತು. ಆದರೆ ಪಾಕಿಸ್ತಾನ ತಂಡದ ನಾಯಕ ಶಾನ್ ಮಸೂದ್ ತೆಗೆದುಕೊಂಡ ಡಿಕ್ಲೇರ್ ನಿರ್ಧಾರದಿಂದಾಗಿ ರಿಜ್ವಾನ್ಗೆ ಚೊಚ್ಚಲ ಟೆಸ್ಟ್ ದ್ವಿಶತಕ ಸಿಡಿಸುವ ಅವಕಾಶ ಕೈತಪ್ಪಿತು. ಇದೀಗ ಮಸೂದ್ ಅವರು ತೆಗೆದುಕೊಂಡ ಈ ನಿರ್ಧಾರದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ 16 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ನಂತರ 114 ರನ್‌ಗಳಿಗೆ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ಮೊಹಮ್ಮದ್ ರಿಜ್ವಾನ್ ಅವರ ಇನ್ನಿಂಗ್ಸ್ ತಂಡವನ್ನು ತನ್ನದಾಗಿಸಿಕೊಂಡಿತು. ಸೌದ್ ಶಕೀಲ್ ಜತೆಗೂಡಿ ತಂಡವನ್ನು ಬಲಿಷ್ಠ ಸ್ಥಿತಿಗೆ ಕೊಂಡೊಯ್ದರು.

ಮೊಹಮ್ಮದ್ ರಿಜ್ವಾನ್ ಅವರ ಅಂತರರಾಷ್ಟ್ರೀಯ ಟೆಸ್ಟ್ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್ ಕೂಡ ಇದಾಗಿದೆ. ಈ ಮೊದಲು ಅವರು 150 ರನ್‌ಗಳ ಗಡಿಯನ್ನೂ ಮುಟ್ಟಿರಲಿಲ್ಲ. ಇದಕ್ಕೂ ಮೊದಲು ಅಜೇಯ 115 ರನ್‌ಗಳು ಟೆಸ್ಟ್‌ನಲ್ಲಿ ಅವರ ಅತ್ಯುತ್ತಮ ಸ್ಕೋರ್ ಆಗಿತ್ತು. ಇದಲ್ಲದೇ ಟೆಸ್ಟ್‌ನಲ್ಲಿ ಇದು ಅವರ ಮೂರನೇ ಶತಕವಾಗಿದೆ.

ಅಚ್ಚರಿಯ ಸಂಗತಿ ಎಂದರೆ ಈ ಮೂರು ಶತಕಗಳೂ ರಿಜ್ವಾನ್ ಅವರ ಅಜೇಯ ಶತಕಗಳಾಗಿವೆ. ಅಂದರೆ ಈ ಮೂರು ಶತಕಗಳ ಇನ್ನಿಂಗ್ಸ್‌ಗಳಲ್ಲಿ ಅವರು ಅಜೇಯರಾಗಿ ಉಳಿದಿದ್ದಾರೆ. ಇದಲ್ಲದೆ, ಮೊಹಮ್ಮದ್ ರಿಜ್ವಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯನ್ನು ಹಿಂದಿಕ್ಕಿದ್ದಾರೆ.