ಟೆಸ್ಟ್ನಲ್ಲಿ ಭಾರತದ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಪಾಕಿಸ್ತಾನ್
Pakistan vs West Indies: ಪಾಕಿಸ್ತಾನದಲ್ಲಿ ಆಡಲಾದ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ವೇಗದ ಬೌಲರ್ಗಳು ಒಂದೇ ಒಂದು ವಿಕೆಟ್ ಪಡೆದಿಲ್ಲ. ಇದೀಗ ವೆಸ್ಟ್ ಇಂಡೀಸ್ ವಿರುದ್ಧ 20 ವಿಕೆಟ್ ಕಬಳಿಸುವ ಮೂಲಕ ಪಾಕ್ ಸ್ಪಿನ್ನರ್ಗಳು ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಭಾರತದ ಐತಿಹಾಸಿಕ ಸಾಧನೆಯನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.
1 / 6
ಮುಲ್ತಾನ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪಾಕಿಸ್ತಾನ್ 230 ರನ್ ಬಾರಿಸಿದರೆ, ವೆಸ್ಟ್ ಇಂಡೀಸ್ 137 ರನ್ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಪಾಕ್ ತಂಡ 157 ರನ್ಗಳಿಸಿದರೆ, ವೆಸ್ಟ್ ಇಂಡೀಸ್ 123 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಪಾಕಿಸ್ತಾನ್ ತಂಡ 127 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
2 / 6
ವಿಶೇಷ ಎಂದರೆ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎಲ್ಲಾ ವಿಕೆಟ್ಗಳನ್ನು ಪಾಕಿಸ್ತಾನದ ಸ್ಪಿನ್ನರ್ಗಳೇ ಕಬಳಿಸಿದ್ದಾರೆ. ಅಂದರೆ ಮೊದಲ ಇನಿಂಗ್ಸ್ನಲ್ಲಿ ಸ್ಪಿನ್ನರ್ಗಳಾದ ಸಾಜಿದ್ ಖಾನ್ (4), ನೊಮಾನ್ ಅಲಿ (5) ಹಾಗೂ ಅಬ್ರಾರ್ ಅಹ್ಮದ್ (1) ಜೊತೆಯಾಗಿ 10 ವಿಕೆಟ್ ಕಬಳಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಸಾಜಿದ್ ಖಾನ್ (5), ಅಬ್ರಾರ್ ಅಹ್ಮದ್ (4) ಹಾಗೂ ನೊಮಾನ್ ಅಲಿ (1) ಯೇ 10 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಪಾಕ್ ಸ್ಪಿನ್ನರ್ಗಳೇ 20 ವಿಕೆಟ್ಗಳನ್ನು ಕಬಳಿಸಿದ್ದಾರೆ.
3 / 6
ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತೀ ಹೆಚ್ಚು ಬಾರಿ ಸ್ಪಿನ್ನರ್ಗಳೇ ಎಲ್ಲಾ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ಸರ್ವಶ್ರೇಷ್ಠ ದಾಖಲೆ ಭಾರತ ತಂಡದ ಹೆಸರಿನಲ್ಲಿತ್ತು ಎಂಬುದು ವಿಶೇಷ.
4 / 6
1973ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ಗಳು ಮೊದಲ ಬಾರಿಗೆ 20 ವಿಕೆಟ್ ಕಬಳಿಸಿ ಮಿಂಚಿದ್ದರು. ಇದಾದ ಬಳಿಕ 1976 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಈ ಸಾಧನೆಯನ್ನು ಪುನರಾವರ್ತಿಸಿದ್ದರು. ಇನ್ನು 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಗಳು 20 ವಿಕೆಟ್ ಕಬಳಿಸಿ ಕೈಚಳಕ ಮೆರೆದಿದ್ದರು. ಇದಾದ ಬಳಿಕ 2015 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತೀಯ ಸ್ಪಿನ್ನರ್ಗಳು 20 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಟೀಮ್ ಇಂಡಿಯಾ ಸ್ಪಿನ್ನರ್ಗಳು ಟೆಸ್ಟ್ ಕ್ರಿಕೆಟ್ನಲ್ಲಿ 4 ಬಾರಿ 20 ವಿಕೆಟ್ಗಳ ಐತಿಹಾಸಿಕ ಸಾಧನೆ ಮಾಡಿದ್ದರು.
5 / 6
ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಪಾಕಿಸ್ತಾನ್ ತಂಡ ಯಶಸ್ವಿಯಾಗಿದೆ. 1980 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ್ ತಂಡದ ಸ್ಪಿನ್ನರ್ಗಳು ಮೊದಲ ಬಾರಿಗೆ 20 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ 1987 ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆಯನ್ನು ಪುನರಾವರ್ತಿಸಿದ್ದರು. ಇನ್ನು 2024 ರಲ್ಲಿ ಇಂಗ್ಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳಲ್ಲಿ ಪಾಕ್ ಸ್ಪಿನ್ನರ್ಗಳೇ 40 ವಿಕೆಟ್ ಕಬಳಿಸಿದ್ದರು. ಇದೀಗ 2025 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೂಡ ಪಾಕಿಸ್ತಾನ್ ಸ್ಪಿನ್ನರ್ಗಳು ಮೋಡಿ ಮಾಡಿದ್ದಾರೆ.
6 / 6
ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ್ ಸ್ಪಿನ್ನರ್ಗಳು 5 ಬಾರಿ 20 ವಿಕೆಟ್ ಉರುಳಿಸಿ ಹೊಸ ದಾಖಲೆ ಬರೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಪಾಕಿಸ್ತಾನದಲ್ಲಿ ನಡೆದ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಯಾವುದೇ ವೇಗದ ಬೌಲರ್ ಒಂದೇ ಒಂದು ವಿಕೆಟ್ ಪಡೆದಿಲ್ಲ ಎಂಬುದು. ಇದು ಕೂಡ ಒಂದು ದಾಖಲೆ ಎಂಬುದು ವಿಶೇಷ.
Published On - 9:53 am, Mon, 20 January 25