
ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಪಾಕಿಸ್ತಾನ್ ತಂಡ ಜಯ ಸಾಧಿಸಿದೆ. ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ಪರ ಯುವ ದಾಂಡಿಗ ಸೈಮ್ ಅಯ್ಯೂಬ್ 94 ಎಸೆತಗಳಲ್ಲಿ 13 ಫೋರ್ ಹಾಗೂ 2 ಸಿಕ್ಸ್ ಗಳೊಂದಿಗೆ 101 ರನ್ಗಳ ಭರ್ಜರಿ ಶತಕ ಸಿಡಿಸಿದರು. ಇನ್ನು ಬಾಬರ್ ಆಝಂ 52 ರನ್ ಗಳ ಕೊಡುಗೆ ನೀಡಿದರು.

ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಮೊಹಮ್ಮದ್ ರಿಝ್ವಾನ್ 53 ರನ್ ಚಚ್ಚಿದರು. ಸೈಮ್ ಅಯ್ಯೂಬ್ ಅವರ ಶತಕ ಮತ್ತು ಬಾಬರ್, ರಿಝ್ವಾನ್ರ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ್ ತಂಡವು ನಿಗದಿತ 47 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 308 ರನ್ ಕಲೆಹಾಕಿತು.

309 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಪರ ಹೆನ್ರಿಕ್ ಕ್ಲಾಸೆನ್ 43 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 12 ಫೋರ್ ಗಳೊಂದಿಗೆ 81 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್ ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಸೌತ್ ಆಫ್ರಿಕಾ ತಂಡವು 42 ಓವರ್‌ಗಳಲ್ಲಿ 271 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕಿಸ್ತಾನ್ ತಂಡ 36 ರನ್ ಗಳ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಸೌತ್ ಆಫ್ರಿಕಾದಲ್ಲೇ ವೈಟ್ ವಾಶ್ ಮಾಡಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆ ಪಾಕಿಸ್ತಾನ್ ತಂಡದ ಪಾಲಾಯಿತು. ಅಂದರೆ 53 ವರ್ಷಗಳ ಏಕದಿನ ಇತಿಹಾಸದಲ್ಲಿ ಯಾವುದೇ ತಂಡದ ವಿರುದ್ಧ ಸೌತ್ ಆಫ್ರಿಕಾ ತವರಿನಲ್ಲಿ ಕ್ಲೀನ್ ಸ್ವೀಪ್ ಸೋಲನುಭವಿಸಿಲ್ಲ.

ಇದೀಗ ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಪಾಕಿಸ್ತಾನ್ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸೌತ್ ಆಫ್ರಿಕಾ ಪಡೆಯನ್ನು ಹರಿಣರ ನಾಡಲ್ಲಿ ವೈಟ್ ವಾಶ್ ಮಾಡಿದ ವಿಶ್ವದ ಏಕೈಕ ತಂಡವೆಂಬ ದಾಖಲೆಯನ್ನು ಪಾಕಿಸ್ತಾನ್ ತನ್ನದಾಗಿಸಿಕೊಂಡಿದೆ.