
ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ್ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಒಂದೇ ವರ್ಷದಲ್ಲಿ ಅತೀ ಹೆಚ್ಚು ಗೆಲುವುಗಳನ್ನು ದಾಖಲಿಸುವ ಮೂಲಕ. ಅಂದರೆ ಪಾಕಿಸ್ತಾನ್ ತಂಡವು ಇದೇ ಮೊದಲ ಬಾರಿಗೆ ಒಂದೇ ವರ್ಷದೊಳಗೆ 20ಕ್ಕಿಂತ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದುಕೊಂಡಿದೆ.

ಶ್ರೀಲಂಕಾ, ಝಿಂಬಾಬ್ವೆ ವಿರುದ್ಧದ ತ್ರಿಕೋನ ಸರಣಿಯ 5 ಪಂದ್ಯಗಳಲ್ಲಿ 4 ಗೆಲುವು ದಾಖಲಿಸುವ ಮೂಲಕ ಪಾಕಿಸ್ತಾನ್ ತಂಡವು ಟಿ20 ಕ್ರಿಕೆಟ್ನಲ್ಲಿ ವಿಶೇಷ ಮೈಲುಗಲ್ಲು ದಾಟಿದೆ. ಈ ವರ್ಷ ಪಾಕ್ ತಂಡ ಆಡಿದ 34 ಟಿ20 ಪಂದ್ಯಗಳಲ್ಲಿ ಬರೋಬ್ಬರಿ 21 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ.

ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ತಂಡವು ಇದೇ ಮೊದಲ ಬಾರಿಗೆ 21 ಮ್ಯಾಚ್ಗಳನ್ನು ಗೆದ್ದ ಸಾಧನೆ ಮಾಡಿದೆ. ಇದಕ್ಕೂ ಮುನ್ನ 2021 ರಲ್ಲಿ ಆಡಿದ 29 ಪಂದ್ಯಗಳಲ್ಲಿ 20 ಮ್ಯಾಚ್ ಗೆದ್ದಿದ್ದು ಶ್ರೇಷ್ಠ ಸಾಧನೆಯಾಗಿತ್ತು. ಈ ಬಾರಿ ಈ ದಾಖಲೆಯನ್ನು ಮುರಿದು ಪಾಕ್ ಪಡೆ ಮುನ್ನುಗ್ಗಿದೆ.

ಇದಾಗ್ಯೂ ಉಗಾಂಡ ತಂಡದ ಹೆಸರಿನಲ್ಲಿರುವ ವಿಶ್ವ ದಾಖಲೆ ಮುರಿಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಪಾಕಿಸ್ತಾನ್ ತಂಡವು ಡಿಸೆಂಬರ್ ತಿಂಗಳಲ್ಲಿ ಯಾವುದೇ ಟಿ20 ಸರಣಿ ಆಡುತ್ತಿಲ್ಲ. ಅಲ್ಲದೆ ಮುಂದಿನ ಸರಣಿ ಇರುವುದು ಜನವರಿ ತಿಂಗಳಲ್ಲಿ. ಹೀಗಾಗಿ ಒಂದೇ ವರ್ಷ ಅತ್ಯಧಿಕ ಟಿ20 ಪಂದ್ಯಗಳನ್ನು ಗೆದ್ದ ಉಗಾಂಡ ತಂಡದ ದಾಖಲೆಯನ್ನು ಮುರಿಯಲು ಪಾಕ್ ತಂಡಕ್ಕೆ ಸಾಧ್ಯವಾಗುವುದಿಲ್ಲ.

ಉಗಾಂಡ ತಂಡವು 2023 ರಲ್ಲಿ ಆಡಿದ 33 ಮ್ಯಾಚ್ಗಳಲ್ಲಿ ಬರೋಬ್ಬರಿ 29 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಟಿ20 ಇತಿಹಾಸದಲ್ಲೇ ಒಂದೇ ವರ್ಷ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ನಿರ್ಮಿಸಿದೆ. ಉಗಾಂಡ ಹೆಸರಿನಲ್ಲಿರುವ ಈ ವಿಶೇಷ ವಿಶ್ವ ದಾಖಲೆಯನ್ನು 2026 ರಲ್ಲಿ ಯಾರು ಮುರಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.