ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಬೇಕು ಎಂಬ ಕನಸು ಪ್ರತಿಯೊಬ್ಬ ಕ್ರಿಕೆಟಿಗನಿಗೆ ಇದ್ದೇ ಇದೆ. ಆದರೆ, ಇದರಲ್ಲಿ ಅವಕಾಶ ಸಿಗುವುದು ಅಷ್ಟೊಂದು ಸುಲಭವಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡರಷ್ಟೆ ಸ್ಥಾನ ಭದ್ರ.
ಐಪಿಎಲ್ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟಿಗರಿಗೆ ಬಿಟ್ಟು ಉಳಿದ ಎಲ್ಲ ದೇಶದ ಆಟಗಾರರಿಗೆ ಅನುಮತಿ ಇದೆ. ಪಾಕ್ ಆಟಗಾರರಿಗೆ ಮಾತ್ರ ನಿಷೇಧ ಹೇರಲಾಗಿದೆ.
ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ಸಂಬಂಧವು ಸಂಪೂರ್ಣವಾಗಿ ಹದಗೆಟ್ಟ ನಂತರ, ಪಾಕಿಸ್ತಾನದ ಯಾವ ಆಟಗಾರರು ಕೂಡ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಹೀಗಿರುವಾಗ ಪಾಕ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಅಮೀರ್ ಐಪಿಎಲ್ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
2016 ರಲ್ಲಿ ಬ್ರಿಟನ್ ಯುವತಿ ನರ್ಜೀಸ್ ಖಾನ್ ಅವರನ್ನು ಮದುವೆಯಾದ ಮೊಹಮ್ಮದ್ ಅಮೀರ್, ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. 2020ರಿಂದ ಇಂಗ್ಲೆಂಡ್‌ನಲ್ಲೇ ವಾಸಿಸುತ್ತಿರುವ ಅಮೀರ್, ಮುಂದಿನ ವರ್ಷ ಬ್ರಿಟಿಷ್ ಪೌರತ್ವ ಪಡೆಯಲಿದ್ದಾರೆ. ನಂತರ ಅವರು ಪಾಕಿಸ್ತಾನ ಪ್ರಜೆ ಅಲ್ಲ.
ಬ್ರಿಟಿಷ್ ಪೌರತ್ವ ಪಡೆದ ನಂತರ ಅಮೀರ್ ಐಪಿಎಲ್ನಲ್ಲಿ ಆಡುವ ಅವಕಾಶ ಹೊಂದಲಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಬ್ರಿಟಿಷ್ ಪ್ರಜೆಯಾದ ಬಳಿಕ ನಾನು ಇಂಗ್ಲೆಂಡ್ ತಂಡಕ್ಕೆ ಆಡುವುದಿಲ್ಲ. ಬದಲಾಗಿ ಐಪಿಎಲ್ ಟೂರ್ನಿ ಬಗ್ಗೆ ಯೋಚಿಸುತ್ತೇನೆ. ಅನೇಕ ಲೀಗ್ ಪಂದ್ಯಗಳಲ್ಲಿ ಆಡುವ ಬಯಕೆ ಇದೆ. ಇದಕ್ಕಾಗಿ ಎಲ್ಲಾ ಬಾಗಿಲು ತೆರಿದಿಟ್ಟಿರುತ್ತೇನೆ ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದೇನೆ. ಮತ್ತೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವುದಿಲ್ಲ. ನಾನು ಒಂದೊಂದೇ ಹೆಜ್ಜೆ ಇಡಲು ಬಯಸುತ್ತೇನೆ. ನಾಳೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಈಗಿನಿಂದಲೇ ಐಪಿಎಲ್ 2024ರಲ್ಲಿ ಆಡಬೇಕು ಎಂದು ಕನಸು ಕಾಣುವುದು ಸರಿಯಲ್ - ಮೊಹಮ್ಮದ್ ಅಮೀರ್.
ಮೊಹಮ್ಮದ್ ಅಮೀರ್ ಪಿಸಿಬಿ ಅಧಿಕಾರಿಗಳೊಂದಿಗಿನ ಜಗಳದ ನಂತರ 2020ರ ಡಿಸೆಂಬರ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅಲ್ಲದೆ 2010ರಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ಐದು ವರ್ಷಗಳ ಕಾಲ ಕ್ರಿಕೆಟ್ನಿಂದ ಬ್ಯಾನ್ ಕೂಡ ಆಗಿದ್ದರು.