ಪಾಕಿಸ್ತಾನ್ ಟಿ20 ತಂಡ ಪ್ರಕಟ: ಇಬ್ಬರು ಸ್ಟಾರ್ ಆಟಗಾರರು ಔಟ್
Australia vs Pakistan T20 Series: ಪಾಕಿಸ್ತಾನ್ ಮತ್ತು ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಟಿ20 ಸರಣಿಯು ಜನವರಿ 29 ರಿಂದ ಶುರುವಾಗಲಿದೆ. ಟಿ20 ವಿಶ್ವಕಪ್ಗೂ ಮುನ್ನ ನಡೆಯಲಿರುವ ಈ ಸರಣಿಗಾಗಿ ಪಾಕಿಸ್ತಾನ್ 16 ಸದಸ್ಯರುಗಳ ಬಲಿಷ್ಠ ತಂಡವನ್ನು ಘೋಷಿಸಿದೆ. ಈ ತಂಡದಲ್ಲಿ ಇಬ್ಬರು ಪ್ರಮುಖ ಆಟಗಾರರು ಕಾಣಿಸಿಕೊಂಡಿಲ್ಲ.
Updated on: Jan 24, 2026 | 10:25 AM

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಪಾಕಿಸ್ತಾನ್ ಟಿ20 ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರುಗಳ ಈ ತಂಡವನ್ನು ಸಲ್ಮಾನ್ ಅಲಿ ಅಘಾ ಮುನ್ನಡೆಸಲಿದ್ದಾರೆ. ಇದರೊಂದಿಗೆ ಟಿ20 ವಿಶ್ವಕಪ್ನಲ್ಲೂ ಪಾಕ್ ತಂಡ ನಾಯಕನಾಗಿ ಸಲ್ಮಾನ್ ಅಲಿ ಅಘಾ ಮುಂದುವರೆಯುವುದು ಖಚಿತವಾಗಿದೆ.

ಇನ್ನು ಈ ತಂಡದಲ್ಲಿ ಬಾಬರ್ ಆಝಂ ಹಾಗೂ ಶಾಹೀನ್ ಶಾ ಅಫ್ರಿದಿಯನ್ನು ಸೇರ್ಪಡೆಗೊಳಿಸಲಾಗಿದೆ. ಈ ಹಿಂದೆ ಕಳಪೆ ಫಾರ್ಮ್ ಕಾರಣ ಬಾಬರ್ ಹಾಗೂ ಶಾಹೀನ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಇದೀಗ ಆಸ್ಟ್ರೇಲಿಯಾ ಸರಣಿಗೆ ಹಿರಿಯ ಆಟಗಾರರಿಗೆ ಮಣೆ ಹಾಕಲಾಗಿದೆ.

ಆದರೆ ಮತ್ತೊಂದೆಡೆ ಪಾಕ್ ತಂಡದ ಅನುಭವಿ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಹಾಗೆಯೇ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಹ್ಯಾರಿಸ್ ರೌಫ್ಗೂ ಟಿ20 ತಂಡದಿಂದ ಗೇಟ್ ಪಾಸ್ ನೀಡಲಾಗಿದೆ. ಅದರಂತೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪಾಕಿಸ್ತಾನ್ ಟಿ20 ತಂಡ ಈ ಕೆಳಗಿನಂತಿದೆ...

ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್ , ಫಖರ್ ಝಮಾನ್ , ಖ್ವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಸಾಹಿಬ್ಝಾದ ಫರ್ಹಾನ್ (ವಿಕೆಟ್ ಕೀಪರ್), ಶಾಹೀನ್ ಶಾ ಅಫ್ರಿದಿ, ಸೈಮ್ ಅಯ್ಯೂಬ್, ಶಾದಾಬ್ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಉಸ್ಮಾನ್ ತಾರಿಖ್.

ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್‌ಮನ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಜ್ಯಾಕ್ ಎಡ್ವರ್ಡ್ಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಜೋಶ್ ಫಿಲಿಪಿ, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.
