
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಡುವಿನ ವೇಳಾಪಟ್ಟಿ ಸಂಬಂಧಿತ ಹಗ್ಗಜಗ್ಗಾಟ ಕೊನೆಗೊಂಡಿದೆ. ಭಾರತದಲ್ಲಿ ವಿಶ್ವಕಪ್ ಆಡಲು ಪಾಕ್ ಒಪ್ಪಿಗೆ ನೀಡಿದೆ. ಹೀಗಾಗಿ ಇಂದು (ಜೂನ್ 27) ಬಹುನಿರೀಕ್ಷಿತ ಐಸಿಸಿ ವಿಶ್ವಕಪ್ ವೇಳಾಪಟ್ಟಿ ಹೊರಬೀಳಲಿದೆ.

ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬೈನಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ವಿಶ್ವಕಪ್ 2023 ವೇಳಾಪಟ್ಟಿಯನ್ನು ಅನಾವರಣಗೊಳಿಸಲಿದೆ. 100 ದಿನಗಳ ವಿಶ್ವಕಪ್ ಸಮಾರಂಭವು ಬೆಳಗ್ಗೆ 11:30 ಕ್ಕೆ ಪ್ರಾರಂಭವಾಗಲಿದೆ.

"ಐಸಿಸಿ ವಿಶ್ವಕಪ್ ವೇಳಾಪಟ್ಟಿ ಮಂಗಳವಾರ ಹೊರಬೀಳಲಿದೆ. ಮುಂಬೈನಲ್ಲಿ ಐಸಿಸಿ ಕಾರ್ಯಕ್ರಮವಿದೆ. ಯೋಜಿತ ವೇಳಾಪಟ್ಟಿಯನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ," ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದಾರೆ.

ಪಾಕಿಸ್ತಾನದ ಆಕ್ಷೇಪಗಳ ಹೊರತಾಗಿಯೂ, ಭಾರತ ಹಾಗೂ ಪಾಕ್ ನಡುವಣ ಪಂದ್ಯವು ಅಹಮದಾಬಾದ್‌ನಲ್ಲೇ ನಡೆಯಲಿದೆ. ಈ ಪಂದ್ಯವನ್ನು ಚೆನ್ನೈ, ಬೆಂಗಳೂರು ಅಥವಾ ಕೋಲ್ಕತ್ತಾಗೆ ಸ್ಥಳಾಂತರಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಆದರೆ, ಇದೀಗ ಅಂತಿಮವಾಗಿ ಅಹ್ಮದಾಬಾದ್ನಲ್ಲೇ ನಡೆಸಲು ಒಪ್ಪಿಗೆ ನೀಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ 1,30,000 ಪ್ರೇಕ್ಷಕರಿಗೆ ಆತಿಥ್ಯ ವಹಿಸುತ್ತದೆ. ಇಲ್ಲಿ ಭಾರತ-ಪಾಕ್ ಪಂದ್ಯ ನಡೆದರೆ ಸ್ಟೇಡಿಯಂ ಹೌಸ್ಫುಲ್ ಆಗಲಿದ್ದು, ಟಿಕೆಟ್ಗಳಿ ಸಂಪೂರ್ಣ ಮಾರಾಟವಾಗುವ ನಿರೀಕ್ಷೆಯಿದೆ. ಹೀಗಾಗಿ ಬಿಸಿಸಿಐ ಅಥವಾ ಐಸಿಸಿ ಸ್ಥಳವನ್ನು ಬದಲಾಯಿಸಲು ಒಪ್ಪಿಲ್ಲ ಎನ್ನಲಾಗಿದೆ.

ಭಾರತ-ಪಾಕ್ ಪಂದ್ಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅಲ್ಲದೆ ಐಸಿಸಿಯ ಉನ್ನತ ಅಧಿಕಾರಿಗಳು ಮತ್ತು ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗುತ್ತದೆ. ಬಿಸಿಸಿಐ ಪಾಕಿಸ್ತಾನ ಪ್ರಧಾನಿ ಮತ್ತು ಪಿಸಿಬಿ ಮುಖ್ಯಸ್ಥರನ್ನೂ ಆಹ್ವಾನಿಸಲಿದೆ ಎಂದು ವರದಿ ಆಗಿದೆ.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ನಡೆಯಲಿದೆ. ಭಾರತ ತಂಡ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ ಎನ್ನಲಾಗಿದೆ.