Updated on: Jun 26, 2023 | 7:45 PM
ICC World Cup Qualifiers 2023: ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಎಸ್ ವಿರುದ್ಧ ಝಿಂಬಾಬ್ವೆ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ಪರ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಇನಿಂಗ್ಸ್ ಆಡಿದ್ದರು.
ಜಾಯ್ಲಾರ್ಡ್ ಗುಂಬಿ (78) ಹಾಗೂ ಇನ್ನೊಸೆಂಟ್ (32) ಝಿಂಬಾಬ್ವೆ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲಿಯಮ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ವಿಲಿಯಮ್ಸ್ ಅಬ್ಬರ ತಡೆಯುವಲ್ಲಿ ಯುಎಸ್ಎ ಬೌಲರ್ಗಳು ವಿಫಲರಾದರು. ಇತ್ತ ಝಿಂಬಾಬ್ವೆ ನಾಯಕ ಕೇವಲ 65 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆತ್ತಿದರು.
ಭರ್ಜರಿ ಶತಕದ ಬೆನ್ನಲ್ಲೇ ರನ್ ಗತಿ ಹೆಚ್ಚಿಸಿದ ವಿಲಿಯಮ್ಸ್ ಯುಎಸ್ಎ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಸೀನ್ ವಿಲಿಯಮ್ಸ್ ಬ್ಯಾಟ್ನಿಂದ ಬರೋಬ್ಬರಿ 21 ಫೋರ್ಗಳು ಹಾಗೂ 4 ಭರ್ಜರಿ ಸಿಕ್ಸ್ಗಳು ಮೂಡಿಬಂತು. ಅಲ್ಲದೆ 101 ಎಸೆತಗಳಲ್ಲಿ 174 ರನ್ ಬಾರಿಸಿ ಔಟಾದರು.
ಇನ್ನು ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಸಿಕಂದರ್ ರಾಝ (48) ಹಾಗೂ ರಯಾನ್ ಬರ್ಲ್ (47) ತಂಡದ ಮೊತ್ತವನ್ನು 400ರ ಗಡಿದಾಟಿಸಿದರು. ಅಂತಿಮವಾಗಿ ಝಿಂಬಾಬ್ವೆ 6 ವಿಕೆಟ್ ನಷ್ಟಕ್ಕೆ 408 ರನ್ ಕಲೆಹಾಕಿತು.
409 ರನ್ಗಳ ಬೃಹತ್ ಗುರಿ ಪಡೆದ ಯುಎಸ್ಎ ಪರ ಅಭಿಷೇಕ್ ಪರಾಡ್ಕರ್ 24 ರನ್ಗಳಿಸಿದ್ದು ಗರಿಷ್ಠ ಸ್ಕೋರ್. ಇತ್ತ ರಿಚರ್ಡ್ ನಾಗರವ ಹಾಗೂ ಸಿಕಂದರ್ ರಾಝ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಇವಾನ್ಸ್, ಬರ್ಲ್, ಜೊಂಗ್ವೆ ತಲಾ ಒಂದೊಂದು ವಿಕೆಟ್ ಪಡೆದರು. ಹಾಗೆಯೇ ಮೂವರು ರನೌಟ್ ಆಗಿ ಹೊರನಡೆದರು. ಪರಿಣಾಮ ಯುಎಸ್ಎ ತಂಡವು 104 ರನ್ಗಳಿಗೆ ಆಯಿತು.
ಇದರೊಂದಿಗೆ ಝಿಂಬಾಬ್ವೆ ತಂಡವು 304 ರನ್ಗಳ ಅಮೋಘ ಗೆಲುವು ದಾಖಲಿಸಿತು. ವಿಶೇಷ ಎಂದರೆ ಇದು ಏಕದಿನ ಕ್ರಿಕೆಟ್ನ 2ನೇ ಅತೀ ದೊಡ್ಡ ಅಂತರದ ಗೆಲುವುದಾಗಿದೆ.
ಏಕದಿನ ಕ್ರಿಕೆಟ್ನಲ್ಲಿ ಅತೀ ದೊಡ್ಡ ಅಂತರದಿಂದ ಗೆದ್ದ ವಿಶ್ವ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ. 2023 ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡವು 317 ರನ್ಗಳ ಭರ್ಜರಿ ಜಯ ಸಾಧಿಸಿತ್ತು.
ಇದೀಗ ಯುಎಸ್ಎ ವಿರುದ್ಧ 304 ರನ್ಗಳಿಂದ ಗೆಲುವು ದಾಖಲಿಸಿರುವ ಝಿಂಬಾಬ್ವೆ ಈ ವಿಶ್ವ ದಾಖಲೆ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದೆ. ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ 300 ಕ್ಕಿಂತ ಅಧಿಕ ರನ್ಗಳಿಂದ ಜಯ ಸಾಧಿಸಿದ 2ನೇ ತಂಡ ಎಂಬ ವಿಶ್ವ ದಾಖಲೆಯನ್ನೂ ಕೂಡ ನಿರ್ಮಿಸಿದೆ.