Updated on: Jun 26, 2023 | 9:23 PM
ICC World Cup Qualifiers 2023: ಹರಾರೆಯಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ದಾಂಡಿಗ ನಿಕೋಲಸ್ ಪೂರನ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡವು ವಿಂಡೀಸ್ ಅನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ಗೆ ಬ್ರೆಂಡನ್ ಕಿಂಗ್ (76) ಹಾಗೂ ಜಾನ್ಸನ್ ಚಾರ್ಲ್ಸ್ (54) ಉತ್ತಮ ಆರಂಭ ಒದಗಿಸಿದ್ದರು. ಇವರಿಬ್ಬರ ನಿರ್ಗಮನದ ಬಳಿಕ ಜೊತೆಯಾದ ಶಾಯ್ ಹೋಪ್ ಹಾಗೂ ನಿಕೋಲಸ್ ಪೂರನ್ ಅದ್ಭುತ ಇನಿಂಗ್ಸ್ ಆಡಿದರು.
38 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 47 ರನ್ ಬಾರಿಸಿ ಶಾಯ್ ಹೋಪ್ ಔಟಾದರು. ಆದರೆ ಮತ್ತೊಂದೆಡೆ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ ಪೂರನ್ ನೆದರ್ಲ್ಯಾಂಡ್ಸ್ ಬೌಲರ್ಗಳ ಬೆಂಡೆತ್ತಿದರು.
ಪೂರನ್ ಸ್ಪೋಟಕ ಬ್ಯಾಟಿಂಗ್ಗೆ ನಲುಗಿದ ನೆದರ್ಲ್ಯಾಂಡ್ಸ್ ಬೌಲರ್ಗಳು ಲಯ ತಪ್ಪಿದರು. ಇದನ್ನೇ ಬಂಡವಾಳ ಮಾಡಿಕೊಂಡ ಎಡಗೈ ದಾಂಡಿಗ 6 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳನ್ನು ಬಾರಿಸಿದರು.
ಪರಿಣಾಮ ಕೇವಲ 63 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದ ಪೂರನ್ ಬ್ಯಾಟ್ ಮೇಲೆತ್ತಿದರು. ಅಲ್ಲದೆ ಅಂತಿಮವಾಗಿ 65 ಎಸೆತಗಳಲ್ಲಿ ಅಜೇಯ 104 ರನ್ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ತಂಡದ ಮೊತ್ತವನ್ನು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ಕ್ಕೆ ತಂದು ನಿಲ್ಲಿಸಿದರು.
ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಇದು ನಿಕೋಲಸ್ ಪೂರನ್ ಅವರ 2ನೇ ಶತಕ. ಇದಕ್ಕೂ ಮುನ್ನ ನೇಪಾಳ ವಿರುದ್ಧ 94 ಎಸೆತಗಳಲ್ಲಿ 115 ರನ್ ಬಾರಿಸಿದ್ದರು. ಇದೀಗ ನೆದರ್ಲ್ಯಾಂಡ್ಸ್ ವಿರುದ್ಧ 65 ಎಸೆತಗಳಲ್ಲಿ ಅಜೇಯ 104 ರನ್ಗಳಿಸಿ ಮಿಂಚಿದ್ದಾರೆ.