
ಶ್ರೀಲಂಕಾ ತಂಡದ ಎಡಗೈ ಸ್ಪಿನ್ನರ್ ಪ್ರಬಾತ್ ಜಯಸೂರ್ಯ (Prabath Jayasuriya) ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅದು ಕೂಡ ಕೇವಲ 8 ಟೆಸ್ಟ್ ಪಂದ್ಯಗಳಲ್ಲಿ 7 ಬಾರಿ 5 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎಂಬುದು ವಿಶೇಷ.

ಕೊಲಂಬೊದಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿದ್ದ ಪ್ರಬಾತ್ ಜಯಸೂರ್ಯ ದ್ವಿತೀಯ ಇನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಮಿಂಚಿದರು. ಈ ಭರ್ಜರಿ ಪ್ರದರ್ಶನದೊಂದಿಗೆ ಲಂಕಾ ಸ್ಪಿನ್ನರ್ ಹಲವು ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

ಈ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಕಬಳಿಸುವುದರೊಂದಿಗೆ ಮೊದಲ 10 ಟೆಸ್ಟ್ ಪಂದ್ಯಗಳಿಂದ ಅತ್ಯಧಿಕ ವಿಕೆಟ್ ಪಡೆದ ಸ್ಪಿನ್ನರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ಮೌರಿಸ್ ಡಬ್ಲ್ಯೂ ಟೇಟ್ ಹೆಸರಿನಲ್ಲಿತ್ತು. ಟೇಟ್ ಮೊದಲ 10 ಪಂದ್ಯಗಳಿಂದ 65 ವಿಕೆಟ್ ಕಬಳಿಸಿ ಈ ದಾಖಲೆ ಬರೆದಿದ್ದರು. ಇದೀಗ ಪ್ರಬಾತ್ ಜಯಸೂರ್ಯ 67 ವಿಕೆಟ್ ಉರುಳಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹಾಗೆಯೇ ಮೊದಲ 10 ಪಂದ್ಯಗಳಿಂದ ಅತ್ಯಧಿಕ ವಿಕೆಟ್ ಪಡೆದ ಏಷ್ಯನ್ ಹಾಗೂ ವಿಶ್ವದ ಮೂರನೇ ಬೌಲರ್ ಎಂಬ ದಾಖಲೆಯನ್ನು ಪ್ರಬಾತ್ ನಿರ್ಮಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲ 10 ಟೆಸ್ಟ್ಗಳಲ್ಲಿ 71 ವಿಕೆಟ್‌ಗಳನ್ನು ಪಡೆದ ಇಂಗ್ಲೆಂಡ್‌ನ ಥಾಮಸ್ ರಿಚರ್ಡ್‌ಸನ್ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಚಾರ್ಲ್ಸ್ ಟರ್ನರ್ (69 ವಿಕೆಟ್ಸ್) ದ್ವಿತೀಯ ಸ್ಥಾನದಲ್ಲಿದ್ದಾರೆ. ಇದೀಗ 67 ವಿಕೆಟ್ಗಳೊಂದಿಗೆ ಪ್ರಬಾತ್ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಪ್ರಬಾತ್ 5 ವಿಕೆಟ್ ಕಬಳಿಸಿದ್ದರು. ಇದರೊಂದಿಗೆ ಕಳೆದ 8 ಟೆಸ್ಟ್ ಪಂದ್ಯಗಳಲ್ಲಿ 7 ಬಾರಿ ಐದು ವಿಕೆಟ್ ಪಡೆದ ವಿಶೇಷ ದಾಖಲೆಯನ್ನು ಕೂಡ ಬರೆದಿದ್ದಾರೆ. ಅಂದರೆ ಅತೀ ಕಡಿಮೆ ಟೆಸ್ಟ್ನಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಪಡೆದ ದಾಖಲೆ ಪ್ರಬಾತ್ ಜಯಸೂರ್ಯ ಪಾಲಾಗಿದೆ.

ಹಾಗೆಯೇ ಶ್ರೀಲಂಕಾದಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೂ ಪ್ರಬಾತ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ 45 ಬಾರಿ 5 ವಿಕೆಟ್ ಕಬಳಿಸಿದ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದರೆ, ರಂಗನಾ ಹೆರಾತ್ (26 ಬಾರಿ) ದ್ವಿತೀಯ ಸ್ಥಾನದಲ್ಲಿದ್ದಾರೆ. ಇದೀಗ ಕೇವಲ 10 ಪಂದ್ಯಗಳಿಂದ 7 ಬಾರಿ 5 ವಿಕೆಟ್ ಕಬಳಿಸಿ ಪ್ರಬಾತ್ ಜಯಸೂರ್ಯ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಇದಲ್ಲದೆ ಮೊದಲ ಹತ್ತು ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದ ವಿಶ್ವ ದಾಖಲೆ ಕೂಡ ಪ್ರಬಾತ್ ಪಾಲಾಗಿದೆ. ಅಂದರೆ ಕಳೆದ ಹತ್ತು ಪಂದ್ಯಗಳಲ್ಲಿ ಲಂಕಾ ಸ್ಪಿನ್ನರ್ 4 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ.

ಸದ್ಯ 10 ಪಂದ್ಯಗಳಲ್ಲಿ 7 ಬಾರಿ 5 ವಿಕೆಟ್, 2 ಬಾರಿ 4 ವಿಕೆಟ್ ಪಡೆದಿರುವ ಪ್ರಬಾತ್ ಜಯಸೂರ್ಯ 67 ವಿಕೆಟ್ಗಳೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಈ ಸಂಚಲನವು ಮುಂಬರುವ ದಿನಗಳಲ್ಲಿ ಯಾವ ಮಟ್ಟದಲ್ಲಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.