
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ, ಇದೀಗ ಸತತ ಎರಡನೇ ಪಂದ್ಯವನ್ನು ಸೋಲುವ ಸುಳಿವು ನೀಡುತ್ತಿದೆ. 84 ವಿಕೆಟ್ಗಳಿಗೆ ಇಂಗ್ಲೆಂಡ್ನ ಪ್ರಮುಖ 5 ವಿಕೆಟ್ಗಳನ್ನು ಉರುಳಿಸಿದ್ದ ಟೀಂ ಇಂಡಿಯಾ ವೇಗಿಗಳು ಆ ಬಳಿಕ ವಿಕೆಟ್ಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

ಅದರಲ್ಲೂ 2025 ರ ಐಪಿಎಲ್ನಲ್ಲಿ ತಮ್ಮ ಮಾರಕ ದಾಳಿಯ ಮೂಲಕ ಅತ್ಯಧಿಕ ವಿಕೆಟ್ ಪಡೆದು ಪರ್ಪಲ್ ಗೆದ್ದಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಇಂಗ್ಲೆಂಡ್ ಪ್ರವಾಸ ದುಸ್ವಪ್ನದಂತೆ ಕಾಡುತ್ತಿದೆ. ಐಪಿಎಲ್ನಲ್ಲಿ ಹೆಚ್ಚಿಗೆ ರನ್ ನೀಡದೆ ಸಖತ್ ಹೆಸರು ಮಾಡಿದ್ದ ಕೃಷ್ಣ, ಇಂಗ್ಲೆಂಡ್ ಪ್ರವಾಸದಲ್ಲಿ ಸರಾಗವಾಗಿ ರನ್ ಬಿಟ್ಟುಕೊಟ್ಟು ಅತ್ಯಂತ ಕೆಟ್ಟ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಇದುವರೆಗೆ ಯಾವುದೇ ರೀತಿಯಾಗಿ ಪರಿಣಾಮ ಬೀರುವಲ್ಲಿ ವಿಫಲರಾಗಿರುವ ಪ್ರಸಿದ್ಧ್ ಕೃಷ್ಣ, ಇದೀಗ 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಯಾವ ವೇಗಿಯೂ ಬಯಸದ ಅತ್ಯಂತ ಕೆಟ್ಟ ದಾಖಲೆಯೊಂದಕ್ಕೆ ಕೊರಳೊಡ್ಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಪ್ರಸಿದ್ಧ್ ಕೃಷ್ಣ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಎಕಾನಮಿ ರೇಟ್ ಹೊಂದಿರುವ ಬೌಲರ್ ಎಂಬ ಬೇಡದ ದಾಖಲೆ ನಿರ್ಮಿದ್ದಾರೆ. ಟೆಸ್ಟ್‌ನಲ್ಲಿ ಕನಿಷ್ಠ 500 ಎಸೆತಗಳನ್ನು ಬೌಲ್ ಮಾಡಿದ ಬೌಲರ್‌ಗಳ ಬಗ್ಗೆ ಮಾತನಾಡಿದರೆ, ಪ್ರಸಿದ್ಧ್ ಕೃಷ್ಣ ಅವರಲ್ಲಿ ಅತ್ಯಂತ ದುಬಾರಿ ಬೌಲರ್ ಆಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಸಿದ್ಧ ಕೃಷ್ಣ ಅವರ ಎಕಾನಮಿ ದರ ಪ್ರತಿ ಓವರ್‌ಗೆ 5 ರನ್‌ಗಳಿಗಿಂತ ಹೆಚ್ಚಿದ್ದು, ಇದು ಇತರ ಬೌಲರ್ಗಳಿಗೆ ಹೊಲಿಸಿದರೆ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ. ಇದಕ್ಕೆ ಪೂರಕವಾಗಿ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೃಷ್ಣ ಒಂದೇ ಓವರ್‌ನಲ್ಲಿ 23 ರನ್‌ಗಳನ್ನು ಬಿಟ್ಟುಕೊಟ್ಟು ಸಾಕಷ್ಟು ದುಬಾರಿಯಾದರು.

ಒಟ್ಟಾರೆ ಟೆಸ್ಟ್ ದಾಖಲೆಯ ಬಗ್ಗೆ ಹೇಳುವುದಾದರೆ, ಬಾಂಗ್ಲಾದೇಶದ ವೇಗದ ಬೌಲರ್ ಶಹಾದತ್ ಹುಸೇನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕೆಟ್ಟ ಎಕಾನಮಿ ರೇಟ್ ಹೊಂದಿದ್ದು, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 5380 ಎಸೆತಗಳಲ್ಲಿ 4.16 ಎಕಾನಮಿ ರೇಟ್‌ನಲ್ಲಿ 3731 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

ಇನ್ನು ಟೀಂ ಇಂಡಿಯಾ ಬಗ್ಗೆ ಹೇಳುವುದಾದರೆ.. ಎಡಗೈ ವೇಗಿ ಆರ್ಪಿ ಸಿಂಗ್ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಳಪೆ ಎಕಾನಮಿ ರೇಟ್ ಹೊಂದಿರುವ ಬೇಡದ ದಾಖಲೆ ನಿರ್ಮಿಸಿದ್ದಾರೆ. ಅವರು 2534 ಎಸೆತಗಳಲ್ಲಿ 3.98 ಎಕಾನಮಿ ರೇಟ್‌ನಲ್ಲಿ ರನ್ ನೀಡಿದ್ದಾರೆ.