
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಮುಕ್ತಾಯದ ವೇಳೆ ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಒಟ್ಟು 16 ಓವರ್ಗಳನ್ನು ಎಸೆದಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ 13 ಓವರ್ ಬೌಲಿಂಗ್ ಮಾಡಿದ್ದ ಪ್ರಸಿದ್ಧ್, ದ್ವಿತೀಯ ಇನಿಂಗ್ಸ್ನಲ್ಲಿ 3 ಓವರ್ಗಳನ್ನು ಎಸೆದಿದ್ದಾರೆ.

ಈ 16 ಓವರ್ಗಳೊಂದಿಗೆ ಪ್ರಸಿದ್ಧ್ ಕೃಷ್ಣ ಟೆಸ್ಟ್ ಕ್ರಿಕೆಟ್ನಲ್ಲಿ 100 ಓವರ್ಗಳನ್ನು ಪೂರೈಸಿದ್ದಾರೆ. ಈವರೆಗೆ 5 ಟೆಸ್ಟ್ ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ವೇಗಿ 9 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಎಸೆದಿರುವುದು ಬರೋಬ್ಬರಿ 636 ಎಸೆತಗಳು. ಅಂದರೆ 106 ಓವರ್ಗಳು. ಈ ಮೂಲಕ ನೀಡಿರುವುದು ಬರೋಬ್ಬರಿ 535 ರನ್ಗಳು.

ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ 100 ಓವರ್‌ಗಳಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎಂಬ ಕಳಪೆ ದಾಖಲೆಯೊಂದು ಪ್ರಸಿದ್ಧ್ ಕೃಷ್ಣ ಪಾಲಾಗಿದೆ. ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಇದ್ದದ್ದು ಟೀಮ್ ಇಂಡಿಯಾದ ಮಾಜಿ ವೇಗಿಯ ಹೆಸರಿನಲ್ಲಿ ಎಂಬುದು ವಿಶೇಷ.

ಭಾರತದ ಪರ 9 ಟೆಸ್ಟ್ ಪಂದ್ಯಗಳನ್ನಾಡಿರುವ ವರುಣ್ ಆರೋನ್ ಮೊದಲ 100 ಓವರ್‌ಗಳಲ್ಲಿ 480 ರನ್ಗಳನ್ನು ನೀಡಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಆರಂಭಿಕ ನೂರು ಓವರ್‌ಗಳಲ್ಲಿ ಅತೀ ಹೆಚ್ಚು ರನ್ ನೀಡಿದ ಬೌಲರ್ ಎಂಬ ಕಳಪೆ ದಾಖಲೆಯನ್ನು ವರುಣ್ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಪ್ರಸಿದ್ಧ್ ಕೃಷ್ಣ ಮುರಿದಿದ್ದಾರೆ. ಅದು ಕೂಡ 100 ಓವರ್‌ಗಳಲ್ಲಿ ಬರೋಬ್ಬರಿ 510 ರನ್ಗಳನ್ನು ನೀಡುವ ಮೂಲಕ ಎಂಬುದು ವಿಶೇಷ. ಅಂದರೆ ಪ್ರಸಿದ್ಧ್ ತನ್ನ ಟೆಸ್ಟ್ ಕೆರಿಯರ್ನ ಮೊದಲ 600 ಎಸೆತಗಳಲ್ಲಿ 510 ರನ್ಗಳನ್ನು ನೀಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ 100 ಓವರ್‌ಗಳಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು 5 ಟೆಸ್ಟ್ ಪಂದ್ಯಗಳ 9 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಪ್ರಸಿದ್ಧ್ ಕೃಷ್ಣ ಈವರೆಗೆ 13 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದರೆ ಈ ವೇಳೆ ಪ್ರತಿ ಓವರ್ಗೆ 5.05 ಸರಾಸರಿಯಲ್ಲಿ ರನ್ ನೀಡಿದ್ದಾರೆ. ಹೀಗಾಗಿ ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಉತ್ತಮ ಬೌಲಿಂಗ್ ಸಂಘಟಿಸದಿದ್ದರೆ ಮುಂದಿನ ಪಂದ್ಯದಿಂದ ಹೊರಬೀಳುವುದು ಖಚಿತ ಎನ್ನಬಹುದು.