
ಮಹಾರಾಷ್ಟ್ರ ಪರ ತಮ್ಮ ಮೊದಲ ರಣಜಿ ಟ್ರೋಫಿ ಪಂದ್ಯವನ್ನು ಆಡುತ್ತಿರುವ ಪೃಥ್ವಿ ಶಾ, ಈ ಆವೃತ್ತಿಯ ಎರಡನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮಹಾರಾಷ್ಟ್ರ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಪೃಥ್ವಿ ಕೇವಲ 141 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಚಂಡೀಗಢ ವಿರುದ್ಧ ತಮ್ಮ ತವರು ನೆಲದಲ್ಲಿ ನಡೆದ ಈ ಪಂದ್ಯದಲ್ಲಿ ಪೃಥ್ವಿ ಶಾ ಒಟ್ಟು 156 ಎಸೆತಗಳನ್ನು ಎದುರಿಸಿ 5 ಸಿಕ್ಸರ್‌ಗಳು ಮತ್ತು 29 ಬೌಂಡರಿಗಳ ಸಹಿತ 222 ರನ್ ಬಾರಿಸಿದರು.

142 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಪೃಥ್ವಿ ಮಹಾರಾಷ್ಟ್ರ ಪರ ತಮ್ಮ ಮೊದಲ ಪ್ರಥಮ ದರ್ಜೆ ಶತಕ ಬಾರಿಸಿದರು. ಇದಕ್ಕೂ ಮೊದಲು ಪೃಥ್ವಿ ಮುಂಬೈ ಪರ ಆಡಿದ್ದರು, ಆದರೆ ತಂಡದಿಂದ ಕೈಬಿಟ್ಟ ನಂತರ ಅವರು ಮಹಾರಾಷ್ಟ್ರ ತಂಡವನ್ನು ಸೇರಿಕೊಂಡಿದ್ದರು. ಈಗ ಪೃಥ್ವಿ ತಮ್ಮ ದ್ವಿಶತಕದ ಮೂಲಕ ಮಹಾರಾಷ್ಟ್ರ ತೋರಿಸಿದ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದಾಗ್ಯೂ ಮೊದಲ ರಣಜಿ ಟ್ರೋಫಿ ಪಂದ್ಯದಲ್ಲಿ ಪೃಥ್ವಿ ಶಾ ವಿಫಲರಾಗಿದ್ದರು. ಹಾಗೆಯೇ ಚಂಡೀಗಢ ವಿರುದ್ಧದ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 8 ರನ್ ಗಳಿಸಿ ಔಟಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪೃಥ್ವಿ, ಚಂಡೀಗಢದ ಪ್ರತಿ ಬೌಲರ್‌ಗಳನ್ನು ಕಾಡಿದರು. ನಿಶಾಂಕ್ ಬಿರ್ಲಾ ವಿರುದ್ಧ, ಅವರು 40 ಎಸೆತಗಳಲ್ಲಿ 57 ರನ್ ಬಾರಿಸಿದರೆ, ಜಗಜಿತ್ ಸಂಧು ವಿರುದ್ಧ 20 ಎಸೆತಗಳಲ್ಲಿ 44 ರನ್ ಕಲೆಹಾಕಿದರು. .

ಈ ದ್ವಿಶತಕ ಪೃಥ್ವಿ ಶಾ ಅವರಿಗೆ ಬಹಳ ವಿಶೇಷವಾಗಿದೆ, ಏಕೆಂದರೆ ಇದು ರಣಜಿ ಟ್ರೋಫಿಯಲ್ಲಿ ಅವರ ಅತ್ಯಂತ ವೇಗದ ದ್ವಿಶತಕವಾಗಿದೆ. ಇದು ಮಹಾರಾಷ್ಟ್ರದ ಪರ ಯಾವುದೇ ಬ್ಯಾಟ್ಸ್‌ಮನ್‌ನಿಂದ ಬಂದ ಅತ್ಯಂತ ವೇಗದ ದ್ವಿಶತಕವೂ ಆಗಿದೆ. ಈ ಇನ್ನಿಂಗ್ಸ್‌ನೊಂದಿಗೆ, ಪೃಥ್ವಿ ಶಾ ಶೀಘ್ರದಲ್ಲೇ ಟೀಂ ಇಂಡಿಯಾಕ್ಕೆ ಮರಳಲು ಸಿದ್ಧ ಎಂದು ಘೋಷಿಸಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ.. ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ ತಂಡ 313 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಚಂಡೀಗಢ ತಂಡ 209 ರನ್ಗಳಿಗೆ ಆಲೌಟ್ ಆಯಿತು. ಇತ್ತ ಮಹಾರಾಷ್ಟ್ರ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 359 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. 464 ರನ್‌ಗಳ ಗುರಿ ಬೆನ್ನಟ್ಟಿರುವ ಚಂಡೀಗಢ ತಂಡ ಆರಂಭಿಕ ಆಘಾತ ಎದುರಿಸಿದೆ.