ಆಸ್ಟ್ರೇಲಿಯಾ ತಂಡಕ್ಕೆ ಭಾರತೀಯ ಮೂಲದ ಆಟಗಾರ ಆಯ್ಕೆ
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟಿ20 ಸರಣಿಯು ಅಕ್ಟೋಬರ್ 29 ರಿಂದ ಶುರುವಾಗಲಿದೆ. ಕ್ಯಾನ್ಬೆರಾದ ಮನುಕಾ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಮ್ಯಾಚ್ಗೆ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಅಲಭ್ಯರಾಗಿದ್ದಾರೆ. ಅವರ ಬದಲಿಗೆ 23 ವರ್ಷದ ಭಾರತೀಯ ಮೂಲದ ಆಸೀಸ್ ಸ್ಪಿನ್ನರ್ ಆಯ್ಕೆಯಾಗಿದ್ದಾರೆ.
Updated on:Oct 27, 2025 | 1:11 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯು ಅಕ್ಟೋಬರ್ 29 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯದಿಂದ ಆಸೀಸ್ ಸ್ಪಿನ್ನರ್ ಆ್ಯಡಂ ಝಂಪಾ ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ಇದೀಗ ಯುವ ಸ್ಪಿನ್ನರ್ ತನ್ವೀರ್ ಸಂಘ ಆಯ್ಕೆಯಾಗಿದ್ದಾರೆ.

ಟೀಮ್ ಇಂಡಿಯಾ ವಿರುದ್ಧದ ಐದು ಪಂದ್ಯಗಳ ಸರಣಿಗೆ ಪ್ರಕಟಿಸಲಾದ 17 ಸದಸ್ಯರುಗಳ ತಂಡದಲ್ಲಿ ಪ್ರಮುಖ ಸ್ಪಿನ್ನರ್ ಆಗಿ ಆ್ಯಡಂ ಝಂಪಾ ಸ್ಥಾನ ಪಡೆದಿದ್ದರು. ಆದರೀಗ ವೈಯುಕ್ತಿಕ ಕಾರಣಗಳಿಂದಾಗಿ ಕ್ಯಾನ್ಬೆರಾದಲ್ಲಿ ನಡೆಯಲಿರುವ ಮೊದಲ ಮ್ಯಾಚ್ಗೆ ಲಭ್ಯರಿರುವುದಿಲ್ಲ ಎಂದು ಝಂಪಾ ತಿಳಿಸಿದ್ದಾರೆ.

ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಝಂಪಾ ಅವರ ಬದಲಿಗೆ 23 ವರ್ಷದ ತನ್ವೀರ್ ಸಂಘ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ತನ್ವೀರ್ ಸಂಘ ಭಾರತೀಯ ಮೂಲದ ಆಸೀಸ್ ಕ್ರಿಕೆಟಿಗ. ಪಂಜಾಬ್ನ ಜಲಂಧರ್ನಲ್ಲಿ ಜನಿಸಿದ್ದ ತನ್ವೀರ್ ಆ ಬಳಿಕ ಪೋಷಕರೊಂದಿಗೆ ಆಸ್ಟ್ರೇಲಿಯಾಗೆ ವಲಸೆ ಹೋಗಿದ್ದರು.

ಬಾಲ್ಯವನ್ನು ಕಾಂಗರೂನಾಡಿನಲ್ಲೇ ಕಳೆದ ತನ್ವೀರ್ ಸಂಘ ಅಂಡರ್-16 ತಂಡಕ್ಕೆ ಆಯ್ಕೆಯಾಗುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅಂಡರ್-19 ತಂಡಗಳಲ್ಲೂ ಕಾಣಿಸಿಕೊಂಡಿದ್ದರು. ಇನ್ನು 2023 ರಲ್ಲಿ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.

ಆಸ್ಟ್ರೇಲಿಯಾ ಪರ ಈವೆರೆಗೆ 4 ಏಕದಿನ ಹಾಗೂ 7 ಟಿ20 ಪಂದ್ಯಗಳನ್ನಾಡಿರುವ ತನ್ವೀರ್ ಸಂಘ ಒಟ್ಟು 12 ವಿಕೆಟ್ ಕಬಳಿಸಿದ್ದಾರೆ. ಇದೀಗ ಟೀಮ್ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಯೆಲ್ಲೋ ಜೆರ್ಸಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್ (ಮೊದಲ ಮೂರು ಪಂದ್ಯಗಳಿಗೆ ಮಾತ್ರ), ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್‌ಮನ್ (ಕೊನೆಯ 3 ಪಂದ್ಯಗಳಿಗೆ ಮಾತ್ರ), ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್ (ಕೊನೆಯ ಎರಡು ಪಂದ್ಯಗಳಿಗೆ), ನಾಥನ್ ಎಲ್ಲಿಸ್, ಜೋಶ್ ಹೇಝಲ್ವುಡ್ (ಮೊದಲೆರಡು ಪಂದ್ಯಗಳಿಗೆ ಮಾತ್ರ), ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್ (ಕೊನೆಯ ಮೂರು ಪಂದ್ಯಗಳಿಗೆ ಮಾತ್ರ), ಮಿಚೆಲ್ ಓವನ್, ಜೋಶ್ ಫಿಲಿಪ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ತನ್ವೀರ್ ಸಂಘ, ಆ್ಯಡಂ ಝಂಪಾ (ಮೊದಲ ಪಂದ್ಯಕ್ಕೆ ಅಲಭ್ಯ).
Published On - 12:03 pm, Mon, 27 October 25
