ಪಾಕಿಸ್ತಾನ್ ಸೂಪರ್ ಲೀಗ್ನ 11ನೇ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಝ್ವಾನ್ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಮುಲ್ತಾನ್ ಸುಲ್ತಾನ್ಸ್ ವಿರುದ್ಧ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರಾಚಿ ಕಿಂಗ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮುಲ್ತಾನ್ ಸುಲ್ತಾನ್ಸ್ ಪರ ಇನಿಂಗ್ಸ್ ಆರಂಭಿಸಿದ ಶಾನ್ ಮಸೂದ್ ಹಾಗೂ ಮೊಹಮ್ಮದ್ ರಿಝ್ವಾನ್ ಅತ್ಯಾಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. 10.2 ಓವರ್ಗಳಲ್ಲಿ ಮೊದಲ ವಿಕೆಟ್ಗೆ 85 ರನ್ ಪೇರಿಸಿದ ಬಳಿಕ ಮಸೂದ್ (51) ಔಟಾದರು. ಆ ಬಳಿಕ ರಿಲೀ ರೊಸ್ಸೊ ಜೊತೆಗೂಡಿದ ರಿಝ್ವಾನ್ ಬಿರುಸಿನ ಬ್ಯಾಟಿಂಗ್ ಮಾಡಿದರು.
ಕರಾಚಿ ಬೌಲರ್ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ರಿಝ್ವಾನ್ 60 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 64 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 10 ಫೋರ್ನೊಂದಿಗೆ ಅಜೇಯ 110 ರನ್ ಕಲೆಹಾಕಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡದ ಮೊತ್ತ 2 ವಿಕೆಟ್ ನಷ್ಟಕ್ಕೆ 192 ಕ್ಕೆ ಬಂದು ನಿಂತಿತು.
193 ರನ್ಗಳ ಕಠಿಣ ಗುರಿ ಪಡೆದ ಕರಾಚಿ ಕಿಂಗ್ಸ್ ತಂಡಕ್ಕೆ ಆರಂಭಿಕ ಆಟಗಾರ ಜೇಮ್ಸ್ ವಿನ್ಸ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವಿನ್ಸ್ 6 ಭರ್ಜರಿ ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಕೇವಲ 34 ಎಸೆತಗಳಲ್ಲಿ 75 ರನ್ ಬಾರಿಸಿದ್ದರು. ಈ ವೇಳೆ ರನೌಟ್ ಆಗುವ ಮೂಲಕ ಹೊರನಡೆಯಬೇಕಾಯಿತು.
ವಿನ್ಸ್ ಹೊರತುಪಡಿಸಿ ಕರಾಚಿ ಕಿಂಗ್ಸ್ ತಂಡದ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ಪರಿಣಾಮ ಕೊನೆಯ 2 ಓವರ್ಗಳಲ್ಲಿ ಗೆಲ್ಲಲು 40 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ 2 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಇಮಾದ್ ವಾಸಿಂ ಪಂದ್ಯವನ್ನು ರೋಚಕತೆಯ ಹಂತಕ್ಕೆ ಕೊಂಡೊಯ್ದರು. ಪರಿಣಾಮ ಕೊನೆಯ 1 ಓವರ್ನಲ್ಲಿ 22 ರನ್ಗಳು ಬೇಕಿತ್ತು.
ಅಬ್ಬಾಸ್ ಅಫ್ರಿದಿ ಎಸೆದ ಕೊನೆಯ ಓವರ್ನ ಮೊದಲ ಎಸೆತವು ನೋಬಾಲ್ ಆಗಿತ್ತು. ಅದಕ್ಕೆ ಇಮಾದ್ ಸಿಕ್ಸ್ ಉತ್ತರ ನೀಡಿದರು. 2ನೇ ಎಸೆತದಲ್ಲಿ 1 ರನ್. 3ನೇ ಎಸೆತದಲ್ಲಿ ಬೆನ್ ಕಟ್ಟಿಂಗ್ ಭರ್ಜರಿ ಸಿಕ್ಸ್ ಬಾರಿಸಿದರು. 4ನೇ ಎಸೆತದಲ್ಲಿ ಕಟ್ಟಿಂಗ್ ಔಟಾದರು. ಅಂತಿಮ 2 ಎಸೆತಗಳಲ್ಲಿ 6 ರನ್ಗಳು ಬೇಕಿತ್ತು. ಕೊನೆಯ ಎರಡು ಎಸೆತಗಳಲ್ಲಿ ಕರಾಚಿ ಕಿಂಗ್ಸ್ 2 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಮುಲ್ತಾನ್ ಸುಲ್ತಾನ್ಸ್ ತಂಡವು 3 ರನ್ಗಳ ರೋಚಕ ಜಯ ಸಾಧಿಸಿತು.
ಇನ್ನು ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಚೊಚ್ಚಲ ಶತಕ ಬಾರಿಸಿದ ಮೊಹಮ್ಮದ್ ರಿಝ್ವಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.