
ಕೆಲವು ತಿಂಗಳುಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಭಾರತದ ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ವಿದೇಶಿ ಲೀಗ್ಗಳತ್ತ ಮುಖ ಮಾಡಿದ್ದರು. ಅದರಂತೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವುದಾಗಿಯೂ ಹೇಳಿದ್ದರು. ಆ ಪ್ರಕಾರ ಅಶ್ವಿನ್, 2025-26ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪಾದಾರ್ಪಣೆ ಮಾಡಬೇಕಿತ್ತು. ಆದರೆ ಅಶ್ವಿನ್ ತಮ್ಮ ಮೊದಲ ಪಂದ್ಯವನ್ನು ಆಡುವ ಮೊದಲೇ ಆಸ್ಟ್ರೇಲಿಯಾದ ಟಿ20 ಲೀಗ್‌ನಿಂದ ಹಿಂದೆ ಸರಿಯಬೇಕಾಯಿತು.

2025-26ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ತಂಡದ ಪರ ಆಡಬೇಕಿದ್ದ ಅಶ್ವಿನ್ ಮೊಣಕಾಲಿನ ಗಾಯದಿಂದಾಗಿ ಲೀಗ್‌ನಿಂದ ಹೊರಗುಳಿದಿದ್ದಾರೆ. ಕೆಲವು ದಿನಗಳ ಹಿಂದೆ ಸಿಡ್ನಿ ಥಂಡರ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಅಶ್ವಿನ್ 2025-26ರ ಸಂಪೂರ್ಣ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವ ನಿರೀಕ್ಷೆಯಿತ್ತು. ಆದರೆ ಗಾಯದಿಂದ ಬಳಲುತ್ತಿರುವ ಅವರು ಈ ಸೀಸನ್ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ.

ಒಂದು ವೇಳೆ ಅಶ್ವಿನ್ ಈ ಲೀಗ್‌ಗೆ ಪದಾರ್ಪಣೆ ಮಾಡಿದ್ದರೆ, ಆಸ್ಟ್ರೇಲಿಯನ್ ಟಿ20 ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಪುರುಷ ಕ್ರಿಕೆಟಿಗ ಎನಿಸಿಕೊಳ್ಳುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅಶ್ವಿನ್ ತಮ್ಮ ಗಾಯದ ಬಗ್ಗೆ ಇನ್‌ಸ್ಟಾಗ್ರಾಮ್ ಮೂಲಕ ಸಿಡ್ನಿ ಥಂಡರ್‌ಗೆ ಮಾಹಿತಿ ನೀಡಿದ್ದಾರೆ. ಚೆನ್ನೈನಲ್ಲಿ ನಡೆಯುವ ಲೀಗ್‌ಗೆ ತಯಾರಿ ನಡೆಸುವಾಗ ಮೊಣಕಾಲಿಗೆ ಗಾಯವಾಗಿದೆ ಎಂದು ಅವರು ತಮ್ಮ ಬಿಬಿಎಲ್ ತಂಡ ಸಿಡ್ನಿ ಥಂಡರ್‌ಗೆ ಪತ್ರ ಬರೆದಿದ್ದಾರೆ.

ಈ ಗಾಯದಿಂದಾಗಿ ಬಿಬಿಎಲ್‌ನಲ್ಲಿ ಭಾಗವಹಿಸುವುದು ಈಗ ಕಷ್ಟಕರವಾಗಿದೆ. ಬಿಗ್ ಬ್ಯಾಷ್‌ನಲ್ಲಿ ಆಡಲು ತಾವು ತುಂಬಾ ಉತ್ಸುಕರಾಗಿರುವುದಾಗಿ ಅಶ್ವಿನ್ ಹೇಳಿದ್ದಾರೆ. ಸದ್ಯಕ್ಕೆ ಪುನರ್ವಸತಿಗೆ ಒಳಗಾಗುತ್ತೇನೆ ಮತ್ತು ಗಾಯದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಬಿಬಿಎಲ್‌ನಲ್ಲಿ ತಂಡದೊಂದಿಗೆ ಇಲ್ಲದಿರಬಹುದು, ಆದರೆ ಪ್ರತಿ ಪಂದ್ಯವನ್ನು ವೀಕ್ಷಿಸುತ್ತೇನೆ ಮತ್ತು ಸಿಡ್ನಿ ಥಂಡರ್ ಪುರುಷ ಮತ್ತು ಮಹಿಳಾ ತಂಡಗಳನ್ನು ಹುರಿದುಂಬಿಸುತ್ತೇನೆ ಎಂದು ಅಶ್ವಿನ್ ಹೇಳಿದ್ದಾರೆ.

ಅಶ್ವಿನ್ ಅವರು ಪುನರ್ವಸತಿಯಿಂದ ಚೇತರಿಸಿಕೊಂಡು ವೈದ್ಯರಿಂದ ಪ್ರಯಾಣಿಸಲು ಅನುಮತಿ ಪಡೆದರೆ, ಲೀಗ್‌ನ ಅಂತಿಮ ಹಂತಗಳಲ್ಲಿ ತಂಡವನ್ನು ಸೇರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಅಶ್ವಿನ್ ಬಿಗ್ ಬ್ಯಾಷ್ ಲೀಗ್‌ನಿಂದ ಮಾತ್ರವಲ್ಲದೆ ಹಾಂಗ್ ಕಾಂಗ್ ಸಿಕ್ಸರ್ಸ್ 2025 ರಿಂದಲೂ ಹೊರಬಿದಿದ್ದಾರೆ. ಈ ಪಂದ್ಯಾವಳಿ ನವೆಂಬರ್ 7 ರಿಂದ 9 ರವರೆಗೆ ಹಾಂಗ್ ಕಾಂಗ್‌ನ ಟಿನ್ ಕ್ವಾಂಗ್ ರೋಡ್ ರಿಕ್ರಿಯೇಶನ್ ಮೈದಾನದಲ್ಲಿ ನಡೆಯಲಿದೆ.