
ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ಯುವ ದಾಂಡಿಗ ರಚಿನ್ ರವೀಂದ್ರ ಭರ್ಜರಿ (Rachin Ravindra) ದ್ವಿಶತಕ ಬಾರಿಸಿ ಅಬ್ಬರಿಸಿದ್ದಾರೆ. ಮೌಂಟ್ ಮೌಂಗನುಯಿನ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ ಮೊದಲ ದಿನದಾಟದಲ್ಲೇ 189 ಎಸೆತಗಳಲ್ಲಿ ಶತಕ ಪೂರೈಸಿದ್ದರು.

ಇನ್ನು 2ನೇ ದಿನದಾಟದಲ್ಲೂ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ರಚಿನ್ ರವೀಂದ್ರ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ಅಲ್ಲದೆ 340 ಎಸೆತಗಳ ಮೂಲಕ ಚೊಚ್ಚಲ ದ್ವಿಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು. ಈ ಡಬಲ್ ಸೆಂಚುರಿಯೊಂದಿಗೆ ರಚಿನ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ದ್ವಿಶತಕದೊಂದಿಗೆ ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಡಬಲ್ ಸೆಂಚುರಿ ಸಿಡಿಸಿದ 2ನೇ ನ್ಯೂಝಿಲೆಂಡ್ ಬ್ಯಾಟರ್ ಎಂಬ ದಾಖಲೆಯನ್ನು ರಚಿನ್ ಬರೆದಿದ್ದಾರೆ. ಇದಕ್ಕೂ ಮುನ್ನ 2006 ರಲ್ಲಿ ಸ್ಟೀಫನ್ ಪ್ಲೇಮಿಂಗ್ (262) ಈ ಸಾಧನೆ ಮಾಡಿದ್ದರು.

ಈ ಪಂದ್ಯದಲ್ಲಿ 240 ರನ್ ಬಾರಿಸುವ ಮೂಲಕ ರಚಿನ್ ರವೀಂದ್ರ ನ್ಯೂಝಿಲೆಂಡ್ ಪರ 4ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಸ್ಥಾನಗಳಲ್ಲಿ ಕಣಕ್ಕಿಳಿದು ಅತ್ಯಧಿಕ ರನ್ ಕಲೆಹಾಕಿದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ವಿರುದ್ಧ 2014 ರಲ್ಲಿ 302 ರನ್ ಬಾರಿಸಿದ್ದ ಬ್ರೆಂಡನ್ ಮೆಕಲಂ ಅಗ್ರಸ್ಥಾನದಲ್ಲಿದ್ದಾರೆ.

ವಿಶೇಷ ಎಂದರೆ ಈ ಪಂದ್ಯದಲ್ಲಿ 189 ಎಸೆತಗಳಲ್ಲಿ ರಚಿನ್ ರವೀಂದ್ರ ಚೊಚ್ಚಲ ಶತಕ ಪೂರೈಸಿದ್ದರು. ಈ ಚೊಚ್ಚಲ ಶತಕವನ್ನು ಇದೀಗ ಡಬಲ್ ಸೆಂಚುರಿಯನ್ನಾಗಿಸಿದ್ದಾರೆ. ಈ ಮೂಲಕ ನ್ಯೂಝಿಲೆಂಡ್ ಪರ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ 24 ವರ್ಷದ ರಚಿನ್ ರವೀಂದ್ರ ಪಾಲಾಗಿದೆ.

ಒಟ್ಟಿನಲ್ಲಿ ಈ ಪಂದ್ಯದಲ್ಲಿ 366 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರ 26 ಫೋರ್ ಮತ್ತು 3 ಭರ್ಜರಿ ಸಿಕ್ಸ್ನೊಂದಿಗೆ 240 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ರಚಿನ್ ಅವರ ಈ ಭರ್ಜರಿ ಡಬಲ್ ಸೆಂಚುರಿ ನೆರವಿನಿಂದ ಇದೀಗ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 511 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.