
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜಯಭೇರಿ ಬಾರಿಸಿದೆ. ಅದು ಕೂಡ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ. ಮುಲ್ಲನ್ಪುರ್ನ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು.

ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಮಾರಕ ದಾಳಿ ಸಂಘಟಿಸಿದ ಆರ್ಸಿಬಿ ಬೌಲರ್ಗಳು ಪವರ್ಪ್ಲೇನಲ್ಲೇ ಪವರ್ ತೋರಿಸಿದ್ದರು. ಪರಿಣಾಮ 50 ರನ್ಗಳಿಸುವಷ್ಟರಲ್ಲಿ ಪಂಜಾಬ್ ಪಡೆಯು 5 ವಿಕೆಟ್ ಕಳೆದುಕೊಂಡಿತು. ಇನ್ನು 14.1 ಓವರ್ಗಳಲ್ಲಿ 101 ರನ್ಗಳಿಸುವಲಷ್ಟರಲ್ಲಿ ಆಲೌಟ್ ಆಯಿತು.

ಅದರಂತೆ 102 ರನ್ಗಳ ಸುಲಭ ಗುರಿ ಪಡೆದ ಆರ್ಸಿಬಿ ತಂಡಕ್ಕೆ ಫಿಲ್ ಸಾಲ್ಟ್ ಸ್ಫೋಟಕ ಆರಂಭ ಒದಗಿಸಿದರು. ಆರಂಭದಲ್ಲಿ ತುಸು ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಸಾಲ್ಟ್ ಆ ಬಳಿಕ ಅಬ್ಬರಿಸಿದರು. ಪರಿಣಾಮ 10 ಓವರ್ಗಳಲ್ಲಿ ಆರ್ಸಿಬಿ ತಂಡವು 2 ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿತು.

ಈ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಆರ್ಸಿಬಿ ತಂಡವು 9 ವರ್ಷಗಳ ಬಳಿಕ ಫೈನಲ್ಗೆ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಐಪಿಎಲ್ನಲ್ಲಿ ವಿಶೇಷ ದಾಖಲೆಯನ್ನು ಸಹ ಬರೆದಿದೆ. ಅದು ಕೂಡ ಹಾಲಿ ಚಾಂಪಿಯನ್ ಕೆಕೆಆರ್ ತಂಡದ ದಾಖಲೆಯನ್ನು ಮುರಿಯುವ ಮೂಲಕ.

ಅಂದರೆ ಐಪಿಎಲ್ ಇತಿಹಾಸದಲ್ಲೇ ಯಾವುದೇ ತಂಡ 60 ಎಸೆತಗಳನ್ನು ಬಾಕಿಯಿರಿಸಿ ಪ್ಲೇಆಫ್ಗೆ ಪ್ರವೇಶಿಸಿರಲಿಲ್ಲ. ಇದೇ ಮೊದಲ ಬಾರಿಗೆ 10 ಓವರ್ಗಳಲ್ಲಿ ಪಂದ್ಯ ಮುಗಿಸಿ ರಾಯಲ್ ಪಡೆ ಫೈನಲ್ಗೇರಿದೆ. ಇದಕ್ಕೂ ಮುನ್ನ 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 57 ಬಾಲ್ಗಳನ್ನು ಬಾಕಿಯಿರಿಸಿ ಪ್ಲೇಆಫ್ ಪಂದ್ಯ ಗೆದ್ದಿದ್ದು ದಾಖಲೆಯಾಗಿತ್ತು.

ಆದರೆ ಈ ಬಾರಿ ಹೊಸ ಇತಿಹಾಸ ಸೃಷ್ಟಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಗಿದೆ. ಕೇವಲ 10 ಓವರ್ಗಳಲ್ಲಿ ಪಂದ್ಯ ಮುಗಿಸಿ ಐಪಿಎಲ್ ಇತಿಹಾಸದಲ್ಲೇ ಫೈನಲ್ಗೇರಿದ ಮೊದಲ ತಂಡ ಎನಿಸಿಕೊಂಡಿದೆ. ಇದೀಗ ಫೈನಲ್ನಲ್ಲಿರುವ ಆರ್ಸಿಬಿ ಇನ್ನೊಂದು ಪಂದ್ಯ ಗೆದ್ದರೆ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿಯಬಹುದು. ಈ ಮೂಲಕ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಇತಿಹಾಸ ನಿರ್ಮಿಸಲಿದೆಯಾ ಕಾದು ನೋಡಬೇಕಿದೆ.