- Kannada News Photo gallery Cricket photos RCB star Rajat Patidar likely to make his debut in the 1st ODI India vs Bangldesh Check Playing XI
India vs Bangladesh: ಮೊದಲ ಏಕದಿನದಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ರಜತ್ ಪಟಿದಾರ್ ಪದಾರ್ಪಣೆ?
India Playing XI vs Bangladesh 1st ODI: ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ರಜತ್ ಪಟಿದಾರ್ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಡುವ ಸಾಧ್ಯತೆ ಇದೆ.
Updated on: Dec 04, 2022 | 9:20 AM

ಇಂದು ಭಾರತ ಹಾಗೂ ಬಾಂಗ್ಲಾದೇಶ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಕದನವನ್ನು ಏರ್ಪಡಿಸಲಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಯುವ ಹಾಗೂ ಅನುಭವಿ ಆಟಗಾರರಿಂದ ತುಂಬಿರುವ ಟೀಮ್ ಇಂಡಿಯಾದಲ್ಲಿ ಯಾರಿಗೆ ಅವಕಾಶ ಎಂಬುದೇ ರೋಚಕ. ಇದರ ನಡುವೆ ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ಈ ಪಂದ್ಯದ ಮೂಲಕ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.

ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ರಜತ್ ಪಟಿದಾರ್ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಡುವ ಸಾಧ್ಯತೆ ಇದೆ. ಈ ಹಿಂದೆ ಭಾರತ ತಂಡಕ್ಕೆ ಆಯ್ಕೆ ಆಗಿದ್ದರೂ ಇವರಿಗೆ ಅವಕಾಶ ಸಿಗಲಿಲ್ಲ. ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಇವರನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ.

ರಜತ್ ಪಟಿದಾರ್ ಆಡಿದ ಕಳೆದ 10 ಪಂದ್ಯಗಳಲ್ಲಿ ಬರೋಬ್ಬರಿ 368 ರನ್ ಕಲೆಹಾಕಿದ್ದಾರೆ. ಇದರಲ್ಲಿ 5 ಅರ್ಧಶತಕ ಕೂಡ ಸೇರಿದೆ. ಕಳೆದ 10 ಪಂದ್ಯಗಳಲ್ಲಿ ಇವರ ಗರಿಷ್ಠ ಸ್ಕೋರ್ ಅಜೇಯ 92 ರನ್ ಆಗಿದೆ. ಮೊನ್ನೆಯಷ್ಟೇ ಮುಕ್ತಾಯಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲೂ ಪಟಿದಾರ್ ಬೊಂಬಾಟ್ ಆಟ ಆಡಿದ್ದರು.

ಅಲ್ಲದೆ ನ್ಯೂಜಿಲೆಂಡ್ ಎ ವಿರುದ್ಧದ ಮೊದಲ ಪಂದ್ಯದಲ್ಲಿ 176 ರನ್ ಸಿಡಿಸಿದ್ದ ಪಟಿದಾರ್ ಮೂರನೇ ಪಂದ್ಯದಲ್ಲಿ ಅಜೇಯ 109 ರನ್ ಬಾರಿಸಿದ್ದರು. ಅದಲ್ಲದೆ, ಮಧ್ಯಪ್ರದೇಶ ತಂಡದ ರಣಜಿ ಟ್ರೋಫಿ ಗೆಲುವಿನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ 122 ರನ್ ಬಾರಿಸುವ ಮೂಲಕ ರಜತ್ ಗಮನಸೆಳೆದಿದ್ದರು.

ಪಟಿದಾರ್ ಐಪಿಎಲ್ 2021 ರಲ್ಲಿ ಆರ್ಸಿಬಿ ಪರ ಪದಾರ್ಪಣೆ ಮಾಡಿದ್ದರು. ಆದರೆ, ಆ ಸೀಸನ್ನಲ್ಲಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಬಳಿಕ ಐಪಿಎಲ್ 2022 ರಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿ 8 ಪಂದ್ಯಗಳಿಂದ 333 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಕೂಡ ಸೇರಿದೆ. ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಲ್ಲಿ ಪಟಿದಾರ್ ಜೊತೆ ರಾಹುಲ್ ತ್ರಿಪಾಠಿ ಮತ್ತು ಕುಲ್ದೀಪ್ ಸೇನ್ ಕೂಡ ಪದಾರ್ಪಣೆಗೆ ಕಾಯುತ್ತಿದ್ದಾರೆ.

ಇತ್ತ ನಾಯಕ ರೋಹಿತ್ ಶರ್ಮಾ ಅವರಿಗೆ ಓಪನರ್ಗಳು ಯಾರು ಎಂಬ ಗೊಂದಲ ಉಂಟಾಗಿದೆ. ರೋಹಿತ್ಗೆ ಜೋಡಿಯಾಗಿ ಕಣಕ್ಕಿಳಿಯಲು ಮೂರು ಬ್ಯಾಟರ್ಗಳು ತಯಾರಾಗಿದ್ದಾರೆ. ಶಿಖರ್ ಧವನ್, ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಪೈಕಿ ಯಾರಿಗೆ ಸ್ಥಾನ ಎಂಬುದು ಕುತೂಹಲ ಕೆರಳಿಸಿದೆ.

ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರಾಹುಲ್ ತ್ರಿಪಾಠಿ, ರಜತ್ ಪಟಿದಾರ್ ಎಂಬ ಅನೇಕ ಆಯ್ಕೆಗಳಿವೆ. ವಾಷಿಂಗ್ಟನ್ ಸುಂದರ್, ಶಹ್ಬಾಜ್ ಅಹ್ಮದ್ ಹಾಗೂ ಅಕ್ಷರ್ ಪಟೇಲ್ ಆಲ್ರೌಂಡರ್ಗಳಾಗಿದ್ದಾರೆ.

ಶಮಿ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹರ್ ಏಕದಿನ ಸರಣಿಯನ್ನು ವೇಗಿಗಳ ವಿಭಾಗದಿಂದ ಮುನ್ನಡೆಸಬೇಕಿದೆ. ಇವರ ಜೊತೆಗೆ ಕುಲದೀಪ್ ಸೇನ್ ಕೂಡ ರೇಸ್ನಲ್ಲಿದ್ದಾರೆ.

ಭಾರತ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಮೊಹಮ್ಮದ್ ಸಿರಾಜ್.




