ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯಲ್ಲಿಂದು (ಏಪ್ರಿಲ್ 2) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೇಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್ 2024 ರಲ್ಲಿ ಇದು ಆರ್‌ಸಿಬಿಯ ನಾಲ್ಕನೇ ಪಂದ್ಯವಾಗಿದ್ದು, ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಆಡಿರುವ ಮೂರು ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಲಕ್ನೋ ಎರಡು ಪಂದ್ಯದಿಂದ 2 ಅಂಕಗಳನ್ನು ಹೊಂದಿ ಆರನೇ ಸ್ಥಾನದಲ್ಲಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಮೇಲೇಳಲು ಆರ್ಸಿಬಿ ಈ ಪಂದ್ಯ ಗೆಲ್ಲಲೇ ಬೇಕಿದೆ.
ಮಾರ್ಚ್ 22 ರಂದು ನಡೆದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ಬಳಿಕ ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಯ ಓವರ್ನಲ್ಲಿ ಗೆದ್ದು ಜಯದ ಖಾತೆ ತೆರೆದರೆ, ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಸೋತ ಎಲ್ಲ ಪಂದ್ಯಗಳಲ್ಲಿ ಆರ್ಸಿಬಿ ಸೋಲಿಗೆ ಬೌಲರ್ಗಳು ಮುಖ್ಯಕಾರಣರಾದರು. ಇಂದು ಉಭಯ ತಂಡಗಳಿಗೆ ಗೆಲುವು ಮುಖ್ಯವಾಗಿರುವ ಕಾರಣ ಬೆಂಗಳೂರಿನಲ್ಲಿ ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.
ಸಿಎಸ್ಕೆ, ಪಂಜಾಬ್ ಮತ್ತು ಕೆಕೆಆರ್ ವಿರುದ್ಧ ಆರ್ಸಿಬಿ ನೀಡಿದ ಪ್ರದರ್ಶನ ಬೌಲಿಂಗ್ನಲ್ಲಿ ತೀರಾ ಕಳಪೆಯಾಗಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಆಗುವುದು ಖಚಿತ. ಬೆಂಗಳೂರಿನಲ್ಲಿರುವ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ಸ್ವರೂಪವನ್ನು ಗಮನಿಸಿದರೆ, ಆರ್ಸಿಬಿ ತಂಡಕ್ಕೆ ಬಲಿಷ್ಠ ಅನುಭವಿ ಬೌಲರ್ ಬೇಕೇಬೇಕು.
ಕಳೆದ ಮೂರೂ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೀಮರ್ ಅಲ್ಜಾರಿ ಜೋಸೆಫ್ ದುಬಾರಿಯಾದರು. ಜೋಸೆಫ್‌ರ ನೀರಸ ಪ್ರದರ್ಶನದಿಂದ ಇವರು ಪ್ಲೇಯಿಂಗ್ XI ನಿಂದ ಔಟ್ ಆಗುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ಸ್ಟಾರ್ ವೇಗಿ ಲಾಕಿ ಫರ್ಗುಸನ್ ಬರುವುದು ಬಹುತೇಕ ಖಚಿತ. ಅವಕಾಶಕ್ಕಾಗಿ ಕಾಯುತ್ತಿರುವ ಇವರು ಇಂದು ಕಣಕ್ಕಿಳಿಯಬಹುದು.
ಹಾಗೆಯೆ ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗದಲ್ಲೂ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ. ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದಲೂ ಕಳಪೆ ಫಾರ್ಮ್ನಿಂದ ಕಂಗೆಟ್ಟಿರುವ ರಜತ್ ಪಾಟಿದರ್ಗೆ ಇಂದು ಅವಕಾಶ ಸಿಗುವುದು ಅನುಮಾನ. ಇವರ ಜಾಗಕ್ಕೆ ಸುಯೇಶ್ ಪ್ರಭುದೇಸಾಯಿ ಅಥವಾ ಮಹಿಪಾಲ್ ಲುಮ್ರೂರ್ ಬರುವ ಸಾಧ್ಯತೆ ಇದೆ.
ಎಲ್ಎಸ್ಜಿ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ XI: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ , ಸುಯೇಶ್ ಪ್ರಭುದೇಸಾಯಿ, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್.