ವುಮೆನ್ಸ್ ಪ್ರೀಮಿಯರ್ ಲೀಗ್ನ (WPL 2025) ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಅದು ಸಹ 202 ರನ್ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿ. ಈ ಭರ್ಜರಿ ಗೆಲುವಿನ ರೂವಾರಿಗಳಲ್ಲಿ ರಿಚಾ ಘೋಷ್ ಕೂಡ ಒಬ್ಬರು.
ಗುಜರಾತ್ ಜೈಂಟ್ಸ್ ತಂಡ ನೀಡಿದ 202 ರನ್ಗಳ ಸವಾಲನ್ನು ಬೆನ್ನತ್ತಿದ ಆರ್ಸಿಬಿ ಪರ ಇಬ್ಬರು ಅರ್ಧಶತಕ ಬಾರಿಸಿದ್ದರು. ಮೊದಲಿಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಲ್ಲಿಸ್ ಪೆರ್ರಿ (57) 27 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು. ಇದಾದ ಬಳಿಕ ಆರ್ಭಟಿಸಿದ್ದು ರಿಚಾ ಘೋಷ್.
ಗುಜರಾತ್ ಜೈಂಟ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ರಿಚಾ ಘೋಷ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಆರ್ಸಿಬಿ ವಿಕೆಟ್ ಕೀಪರ್ ಬ್ಯಾಟರ್ ಕಡೆಯಿಂದ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಆರ್ಸಿಬಿ ಪರ ಸ್ಪೋಟಕ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ರಿಚಾ ಘೋಷ್ ಪಾಲಾಯಿತು.
ಅಲ್ಲದೆ WPL ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಐದನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸೋಫಿಯಾ ಡಂಕ್ಲಿ. 2023 ರಲ್ಲಿ ಗುಜರಾತ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಡಂಕ್ಲಿ ಆರ್ಸಿಬಿ ವಿರುದ್ಧ ಕೇವಲ 18 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು. ಇದೀಗ ಗುಜರಾತ್ ಜೈಂಟ್ಸ್ ವಿರುದ್ಧ ರಿಚಾ ಘೋಷ್ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
ಇನ್ನು ಈ ಪಂದ್ಯದಲ್ಲಿ 27 ಎಸೆತಗಳನ್ನು ಎದುರಿಸಿದ ರಿಚಾ ಘೋಷ್ 4 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 64 ರನ್ ಚಚ್ಚಿದರು. ಅಲ್ಲದೆ ಕನಿಕಾ ಅಹುಜಾ (30) ಜೊತೆಗೂಡಿ ಆರ್ಸಿಬಿ ತಂಡವನ್ನು 18.3 ಓವರ್ಗಳಲ್ಲಿ 202 ರನ್ಗಳ ಗುರಿ ಮುಟ್ಟಿಸಿದರು. ಈ ಮೂಲಕ ಆರ್ಸಿಬಿ ತಂಡವು ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿದೆ.
Published On - 8:08 am, Sat, 15 February 25