ಟೀಮ್ ಇಂಡಿಯಾ ಕಂಡಂತಹ ಶ್ರೇಷ್ಠ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಹೀಗೆ ಏಕಾಏಕಿ ಸುದ್ದಿಯಾಗಲು ಮುಖ್ಯ ಕಾರಣ ಶಿವಂ ದುಬೆ ಅವರ ಪ್ರದರ್ಶನ. ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯಲ್ಲಿ ಎಡಗೈ ದಾಂಡಿಗ ದುಬೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಈ ಭರ್ಜರಿ ಪ್ರದರ್ಶನದ ನಡುವೆ ಶಿವಂ ದುಬೆ ಬಾರಿಸಿದ ಕೆಲ ಹೊಡೆತಗಳು ಯುವರಾಜ್ ಸಿಂಗ್ ಅವರನ್ನು ನೆನಪಿಸುವಂತಿತ್ತು. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಮುಂದಿನ ಯುವರಾಜ್ ಶಿವಂ ದುಬೆ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೀಗ ತನ್ನಂತೆ ಆಡುವ ಆಟಗಾರ ಯಾರು ಎಂಬುದನ್ನು ಖುದ್ದು ಯುವರಾಜ್ ಸಿಂಗ್ ಬಹಿರಂಗಪಡಿಸಿದ್ದಾರೆ.
ನನಗೆ ರಿಂಕು ಸಿಂಗ್ ಅವರ ಬ್ಯಾಟಿಂಗ್ ನೋಡಿದಾಗ ಕೆಲವೊಮ್ಮೆ ನನನ್ನೇ ನೋಡಿದಂತಾಗುತ್ತದೆ. ಆತ ಅತ್ಯುತ್ತಮ ಎಡಗೈ ದಾಂಡಿಗ. ಯಾವಾಗ ಆಕ್ರಮಣಕಾರಿಯಾಗಿ ಆಡಬೇಕು, ಯಾವ ಸಂದರ್ಭದಲ್ಲಿ ಸ್ಟ್ರೈಕ್ ತಿರುಗಿಸಬೇಕು ಎಲ್ಲವೂ ರಿಂಕು ಸಿಂಗ್ಗೆ ಚೆನ್ನಾಗಿ ಗೊತ್ತಿದೆ. ಇವೆಲ್ಲವೂ ನನ್ನಲ್ಲೂ ಇತ್ತು. ಹೀಗಾಗಿ ರಿಂಕು ಆಡುತ್ತಿದ್ದರೆ ನನಗೆ ನನ್ನ ಆಟವೇ ನೆನಪಾಗುತ್ತದೆ ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.
ಒತ್ತಡದ ಸಂದರ್ಭಗಳಲ್ಲಿ ಹೇಗೆ ಆಡಬೇಕೆಂಬುದು ರಿಂಕು ಸಿಂಗ್ಗೆ ತಿಳಿದಿದೆ. ಖಂಡಿತವಾಗಿಯೂ ಆತ ಮ್ಯಾಚ್ ವಿನ್ನರ್. ಒತ್ತಡವನ್ನು ನಿಭಾಯಿಸುವುದನ್ನು ಕರಗತ ಮಾಡಿಕೊಂಡಿದ್ದಾನೆ. ನನ್ನಲ್ಲಿದ್ದ ಕೌಶಲ್ಯವು ಆತನಲ್ಲೂ ಇದೆ ಎಂಬುದನ್ನು ನಾನು ನಿಜವಾಗಿಯೂ ನಂಬುತ್ತೇನೆ. ಹೀಗಾಗಿ ಟೀಮ್ ಇಂಡಿಯಾ 5ನೇ ಅಥವಾ 6ನೇ ಕ್ರಮಾಂಕಗಳಲ್ಲಿ ಆತನನ್ನು ಫಿನಿಶರ್ ಆಗಿ ಬಳಸಿಕೊಳ್ಳಬೇಕೆಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಟೀಮ್ ಇಂಡಿಯಾ ಪರ 2011 ರ ಏಕದಿನ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಟೂರ್ನಿಯಲ್ಲಿ ಒಟ್ಟು 362 ರನ್ ಕಲೆಹಾಕುವ ಮೂಲಕ ಭಾರತ ತಂಡ ವಿಶ್ವಕಪ್ ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅಂತಹದ್ದೇ ಪಾತ್ರ ನಿಭಾಯಿಸಬಲ್ಲ ಸಾಮರ್ಥ್ಯ ರಿಂಕು ಸಿಂಗ್ಗೆ ಇದೆ ಯುವರಾಜ್ ಸಿಂಗ್ ತಿಳಿಸಿದ್ದಾರೆ.
ಈ ಮೂಲಕ ಟೀಮ್ ಇಂಡಿಯಾದಲ್ಲಿ ಯುವರಾಜ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಯಾರಾಗಬಲ್ಲರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಖುದ್ದು ಯುವಿಯೇ ರಿಂಕು ಸಿಂಗ್ ಎಂಬ ಉತ್ತರ ನೀಡಿದ್ದಾರೆ.