
ಟೆಸ್ಟ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ (Rishabh Pant) ಹೊಸ ದಾಖಲೆ ಬರೆದಿದ್ದಾರೆ. ಅದು ಸಹ ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಭರ್ಜರಿ ದಾಖಲೆ ಮುರಿಯುವ ಮೂಲಕ. ಈ ದಾಖಲೆಯೊಂದಿಗೆ ಪಂತ್ ಟೆಸ್ಟ್ ಕ್ರಿಕೆಟ್ನ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲೊ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ಕೇಶವ್ ಮಹಾರಾಜ್ ಅವರ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಈ ಸಿಕ್ಸ್ನೊಂದಿಗೆ ಟೆಸ್ಟ್ನಲ್ಲಿ ಭಾರತದ ಪರ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿತ್ತು. ಸೆಹ್ವಾಗ್ 178 ಇನಿಂಗ್ಸ್ಗಳಲ್ಲಿ 90 ಸಿಕ್ಸ್ ಸಿಡಿಸುವ ಮೂಲಕ ಈ ಭರ್ಜರಿ ದಾಖಲೆ ಬರೆದಿದ್ದರು. 12 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ದಾಖಲೆಯನ್ನು ಇದೀಗ ರಿಷಭ್ ಪಂತ್ ಮುರಿದಿದ್ದಾರೆ.

ಭಾರತದ ಪರ ಈವರೆಗೆ 48 ಟೆಸ್ಟ್ ಪಂದ್ಯಗಳನ್ನಾಡಿರುವ ರಿಷಭ್ ಪಂತ್ 83 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಬರೋಬ್ಬರಿ 91* ಸಿಕ್ಸ್ ಸಿಡಿಸುವ ಮೂಲಕ ಭಾರತದ ಸಿಕ್ಸರ್ ಸರದಾರ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ಇತಿಹಾಸದಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವದ 7ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. 206 ಇನಿಂಗ್ಸ್ಗಳ ಮೂಲಕ ಸ್ಟೋಕ್ಸ್ ಒಟ್ಟು 136 ಸಿಕ್ಸ್ ಸಿಡಿಸಿದ್ದಾರೆ. ಇದೀಗ 91 ಸಿಕ್ಸ್ಗಳೊಂದಿಗೆ ಪಂತ್ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಮುಂಬರುವ ಟೆಸ್ಟ್ ಸರಣಿಗಳಲ್ಲಿ 10 ಸಿಕ್ಸರ್ ಬಾರಿಸಿದರೆ, ಟೆಸ್ಟ್ ಇತಿಹಾಸದಲ್ಲಿ 100 ಸಿಕ್ಸ್ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ 4ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
Published On - 1:25 pm, Wed, 30 July 25