Rishabh Pant: ಪಂಟರ್ ಪಂತ್: ಸ್ಪೋಟಕ ಸೆಂಚುರಿ ಸಿಡಿಸಿದ ರಿಷಭ್
TV9 Web | Updated By: ಝಾಹಿರ್ ಯೂಸುಫ್
Updated on:
Sep 21, 2024 | 12:47 PM
India vs Bangladesh 1st Test: ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದೆ. ಮೊದಲ ಇನಿಂಗ್ಸ್ನಲ್ಲಿ ಭಾರತದ ಪರ ರವಿಚಂದ್ರನ್ ಅಶ್ವಿನ್ ಸೆಂಚುರಿ ಸಿಡಿಸಿದ್ದರು. ಇದೀಗ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮೂರಂಕಿ ರನ್ ಕಲೆಹಾಕಿದ್ದಾರೆ.
1 / 5
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ 123 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ವಿಕೆಟ್ ಕೀಪರ್ಗಳ ಪಟ್ಟಿಯಲ್ಲಿ ರಿಷಭ್ ಪಂತ್ ಅಗ್ರಸ್ಥಾನಕ್ಕೇರಿದ್ದಾರೆ.
2 / 5
ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. ಟೀಮ್ ಇಂಡಿಯಾ ಪರ 144 ಟೆಸ್ಟ್ ಇನಿಂಗ್ಸ್ ಆಡಿರುವ ಧೋನಿ ಕೇವಲ 6 ಶತಕಗಳನ್ನು ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಸರಿಗಟ್ಟುವ ಮೂಲಕ ರಿಷಭ್ ಪಂತ್ ಅಗ್ರಸ್ಥಾನಕ್ಕೇರಿದ್ದಾರೆ.
3 / 5
26 ವರ್ಷದ ರಿಷಭ್ ಪಂತ್ ಕೇವಲ 58 ಇನಿಂಗ್ಸ್ಗಳಲ್ಲಿ ಒಟ್ಟು 6 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಟೆಸ್ಟ್ ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ.
4 / 5
ಇನ್ನು ಈ ಪಂದ್ಯದಲ್ಲಿ 128 ಎಸೆತಗಳನ್ನು ಎದುರಿಸಿದ ರಿಷಭ್ ಪಂತ್ 4 ಭರ್ಜರಿ ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 109 ರನ್ ಬಾರಿಸಿ ಮೆಹದಿ ಹಸನ್ ಮಿರಾಝ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಈ ವೇಳೆಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿತ್ತು.
5 / 5
ಮೊದಲ ಇನಿಂಗ್ಸ್ನ 227 ರನ್ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ ಒಟ್ಟು 470+ ರನ್ ಕಲೆಹಾಕಿದ್ದು, ಈ ಮೂಲಕ ಮೂರನೇ ದಿನದಾಟದಲ್ಲೇ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಅಲ್ಲದೆ ಮೂರನೇ ದಿನದಾಟದ ಅಂತ್ಯದವರೆಗೆ ಟೀಮ್ ಇಂಡಿಯಾ ಬ್ಯಾಟರ್ಗಳು ಇನಿಂಗ್ಸ್ ಮುಂದುವರೆಸುವ ಸಾಧ್ಯತೆಯಿದೆ. ಈ ಮೂಲಕ ಬಾಂಗ್ಲಾದೇಶ್ ತಂಡಕ್ಕೆ ಕಠಿಣ ಗುರಿ ನೀಡಬಹುದು.
Published On - 12:28 pm, Sat, 21 September 24