Updated on: Nov 28, 2022 | 10:54 PM
ವಿಜಯ್ ಹಜಾರೆ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್ನಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಅಸ್ಸಾಂ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನ ರುವಾರಿ ರಿಯಾನ್ ಪರಾಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದ ಅಸ್ಸಾಂ ತಂಡದ ನಾಯಕ ಕುನಾಲ್ ಸೈಕಿಯಾ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜಮ್ಮು-ಕಾಶ್ಮೀರದ ಶುಭಂ ಖುಜುರಿಯಾ (120) ಹಾಗೂ ಹೆನಾನ್ ನಜೀರ್ (124) ಭರ್ಜರಿ ಶತಕಗಳನ್ನು ಸಿಡಿಸಿದರು. ಅಲ್ಲದೆ 50 ಓವರ್ಗಳಲ್ಲಿ ಜಮ್ಮು-ಕಾಶ್ಮೀರ ತಂಡವು 7 ವಿಕೆಟ್ ನಷ್ಟಕ್ಕೆ 350 ರನ್ ಕಲೆಹಾಕಿತು.
ಈ ಬೃಹತ್ ಗುರಿ ಬೆನ್ನತ್ತಿದ ಅಸ್ಸಾಂ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಶವ್ ದಾಸ್ (114) ಶತಕ ಬಾರಿಸುವ ಮೂಲಕ ಆಸರೆಯಾದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಿಯಾನ್ ಪರಾಗ್ ಅಕ್ಷರಶಃ ಅಬ್ಬರಿಸಿದರು.
ಮೂರನೇ ವಿಕೆಟ್‌ಗೆ ರಿಶವ್ ಅವರೊಂದಿಗೆ 217 ಎಸೆತಗಳಲ್ಲಿ 277 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಡುವ ಭರವಸೆ ಮೂಡಿಸಿದರು. ಅಷ್ಟೇ ಅಲ್ಲದೆ ಕೇವಲ 116 ಎಸೆತಗಳಲ್ಲಿ 12 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳನ್ನು ಸಿಡಿಸುವ ಮೂಲಕ ರಿಯಾನ್ ಪರಾಗ್ 174 ರನ್ ಚಚ್ಚಿದರು.
ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ರಿಯಾನ್ ಪರಾಗ್ (174) ವಿಕೆಟ್ ಒಪ್ಪಿಸಿದರು. ಆದರೆ ಅಷ್ಟರಲ್ಲಾಗಲೇ 42.2 ಓವರ್ಗಳಲ್ಲಿ ತಂಡದ ಮೊತ್ತವನ್ನು 322 ಕ್ಕೆ ತಂದು ನಿಲ್ಲಿಸಿದ್ದರು. ಅಂತಿಮ 8 ಓವರ್ಗಳಲ್ಲಿ ಸುಲಭ ಗುರಿ ಪಡೆದ ಅಸ್ಸಾಂ ತಂಡವು 46.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 354 ರನ್ ಕಲೆಹಾಕಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ ರಿಯಾನ್ ಪರಾಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸದ್ಯ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿರುವ ಅಸ್ಸಾಂ ತಂಡವು ನಿರ್ಣಾಯಕ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.