
ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದು ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಈ ಹೊಸ ಇನಿಂಗ್ಸ್ನ ಬೆನ್ನಲ್ಲೇ ಚಹಲ್ ಅವರೊಂದಿಗೆ ಆರ್ಜೆ ಮಹ್ವಾಶ್ (Rj Mahvash) ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲೂ ಚಾಂಪಿಯನ್ಸ್ ಟ್ರೋಫಿ ವೇಳೆ ಇಬ್ಬರು ಜೊತೆಯಾಗಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಐಪಿಎಲ್ ವೇಳೆಯೂ ಆರ್ಜೆ ಮಹ್ವಾಶ್ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಸಹ ಯುಜ್ವೇಂದ್ರ ಚಹಲ್ ಪ್ರತಿನಿಧಿಸುವ ಪಂಜಾಬ್ ಕಿಂಗ್ಸ್ ತಂಡದ ಪಂದ್ಯದ ವೇಳೆ. ಚಂಡೀಗಢ್ನ ಮುಲ್ಲನ್ಪುರ್ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಮಹ್ವಾಶ್, ಯುಜ್ವೇಂದ್ರ ಚಹಲ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಹುರಿದುಂಬಿಸುತ್ತಿರುವುದು ಕಂಡು ಬಂದಿತ್ತು.

ಸ್ಟೇಡಿಯಂನಲ್ಲಿ ಗ್ಯಾಲರಿಯಲ್ಲಿ ಹುರಿದುಂಬಿಸುತ್ತಾ ಕುಣಿದು ಕುಪ್ಪಳಿಸುತ್ತಿದ್ದ ಮಹ್ವಾಶ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರೊಂದಿಗೆ ಯುಜ್ವೇಂದ್ರ ಚಹಲ್ ಡೇಟಿಂಗ್ನಲ್ಲಿರುವುದು ಖಚಿತವಾಗಿದೆ. ಏಕೆಂದರೆ ಮಹ್ವಾಶ್ ಕಾಣಿಸಿಕೊಂಡಿದ್ದು, ವಿಐಪಿ ಗ್ಯಾಲರಿಯಲ್ಲಿ. ಗೆಳತಿಗೆ ಈ ಟಿಕೆಟ್ಗಳನ್ನು ಚಹಲ್ ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆಯೂ ಆರ್ಜೆ ಮಹ್ವಾಶ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಈ ಐತಿಹಾಸಿಕ ಜಯದ ಬೆನ್ನಲ್ಲೇ ಆರ್ಜೆ ಮಹ್ವಾಶ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದು ಸಹ ಯುಜ್ವೇಂದ್ರ ಚಹಲ್ ಜೊತೆಗಿನ ಸೆಲ್ಫಿಯೊಂದಿಗೆ. ಈ ಫೋಟೋಗೆ ಎಂತಹ ಅದ್ಭುತ ಪ್ರತಿಭೆ. ಇದಕ್ಕೇನೆ ಐಪಿಎಲ್ನ ಅತ್ಯಧಿಕ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅಸಂಭವ... ಎಂದು ಬರೆದುಕೊಂಡಿದ್ದಾರೆ.

ಅಂದರೆ ಕೆಕೆಆರ್ ವಿರುದ್ಧದ ಪಂದ್ಯದ ಗೆಲುವಿನ ರೂವಾರಿ ಯುಜ್ವೇಂದ್ರ ಚಹಲ್. 4 ಓವರ್ಗಳನ್ನು ಎಸೆದಿದ್ದ ಚಹಲ್ ಮೊದಲ ಮೂರು ಓವರ್ಗಳಲ್ಲಿ ಕೇವಲ 12 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸೋಲಿಗೆ ಕಾರಣಕರ್ತರಾಗಿದ್ದರು. ಇದನ್ನೇ ಅಸಂಭವ ಎನ್ನುವ ಮೂಲಕ ಆರ್ಜೆ ಮಹ್ವಾಶ್, ಯುಜ್ವೇಂದ್ರ ಚಹಲ್ ಅವರನ್ನು ಹಾಡಿ ಹೊಗಳಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಪಂಜಾಬ್ ಕಿಂಗ್ಸ್ ತಂಡವು 15.3 ಓವರ್ಗಳಲ್ಲಿ 111 ರನ್ ಬಾರಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 15.1 ಓವರ್ಗಳಲ್ಲಿ ಕೇವಲ 95 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡ 16 ರನ್ಗಳ ರೋಚಕ ಜಯ ಸಾಧಿಸಿದೆ.