Updated on: Mar 22, 2023 | 10:08 PM
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಹಿಟ್ಮ್ಯಾನ್ 17 ಎಸೆತಗಳಲ್ಲಿ 2 ಸಿಡಿಲಬ್ಬರದ ಸಿಕ್ಸರ್ ಹಾಗೂ 2 ಫೋರ್ನೊಂದಿಗೆ 30 ರನ್ ಬಾರಿಸಿದ್ದರು.
ಈ ಪಂದ್ಯದಲ್ಲಿ ಬಾರಿಸಿದ 2 ಫೋರ್ನೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 900 ಫೋರ್ಗಳನ್ನು ಸಿಡಿಸಿದ ವಿಶೇಷ ಸಾಧಕರ ಪಟ್ಟಿಗೆ ರೋಹಿತ್ ಶರ್ಮಾ ಕೂಡ ಸೇರ್ಪಡೆಯಾದರು. ಅಲ್ಲದೆ ಈ ಸಾಧನೆ ಮಾಡಿದ ಏಳನೇ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು.
ಇದಕ್ಕೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ ಭಾರತದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್ ಹಾಗೂ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ರೋಹಿತ್ ಶರ್ಮಾ.
ಇನ್ನು ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಫೋರ್ ಬಾರಿಸಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 452 ಏಕದಿನ ಇನಿಂಗ್ಸ್ಗಳಲ್ಲಿ ಒಟ್ಟು 2016 ಫೋರ್ಗಳನ್ನು ಬಾರಿಸಿದ್ದಾರೆ. ವಿಶೇಷ ಎಂದರೆ ಸಚಿನ್ ತೆಂಡೂಲ್ಕರ್ ಅವರನ್ನು ಹೊರತುಪಡಿಸಿ ವಿಶ್ವದ ಯಾವುದೇ ಬ್ಯಾಟರ್ ಏಕದಿನ ಕ್ರಿಕೆಟ್ನಲ್ಲಿ 2 ಸಾವಿರ ಫೋರ್ ಬಾರಿಸಿಲ್ಲ.
ಅದೇ ರೀತಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ ಇದ್ದಾರೆ. ಲಂಕಾದ ಮಾಜಿ ಎಡಗೈ ಬ್ಯಾಟರ್ 433 ಇನಿಂಗ್ಸ್ನಲ್ಲಿ ಒಟ್ಟು 1500 ಫೋರ್ ಬಾರಿಸಿದ್ದಾರೆ.
ಹಾಗೆಯೇ ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಮಾರ್ ಸಂಗಾಕ್ಕರ್ ಇದ್ದು, ಸಂಗಾಕ್ಕರ 380 ಇನಿಂಗ್ಸ್ನಲ್ಲಿ 1385 ಫೋರ್ ಬಾರಿಸಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ರಿಕಿ ಪಾಂಟಿಂಗ್ ಇದ್ದು, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ 365 ಏಕದಿನ ಇನಿಂಗ್ಸ್ನಲ್ಲಿ 1231 ಫೋರ್ ಬಾರಿಸಿದ್ದಾರೆ.
ಇನ್ನು ಐದನೇ ಸ್ಥಾನದಲ್ಲಿರುವುದು ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಎಂಬುದು ವಿಶೇಷ. ಕಿಂಗ್ ಕೊಹ್ಲಿ 265 ಏಕದಿನ ಇನಿಂಗ್ಸ್ನಲ್ಲಿ ಇದುವರೆಗೆ ಒಟ್ಟು 1211 ಫೋರ್ ಸಿಡಿಸಿದ್ದಾರೆ.
ವಿಶೇಷ ಎಂದರೆ ಏಕದಿನ ಕ್ರಿಕೆಟ್ನಲ್ಲಿ ಕೇವಲ 20 ಆಟಗಾರರು ಮಾತ್ರ 900 ಹಾಗೂ ಅದಕ್ಕಿಂತ ಹೆಚ್ಚು ಫೋರ್ ಬಾರಿಸಿದ್ದು, ಇದೀಗ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 20ನೇ ಸ್ಥಾನ ಅಲಂಕರಿಸಿದ್ದಾರೆ.