
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಗುರುವಾರ ನಡೆದ 17ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ಅವರ ಅಜೇಯ ಶತಕದ ನೆರವಿನಿಂದ ಟೀಮ್ ಇಂಡಿಯಾ 7 ವಿಕೆಟ್ಗಳ ಗೆಲುವು ಕಂಡು ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ಕಂಡಿತು.

ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಂಡದ ಗೆಲುವಿಗೆ ಕಾರಣರಾದ ವಿರಾಟ್ ಕೊಹ್ಲಿ ಬಗ್ಗೆ ಒಂದು ಮಾತು ಆಡಲಿಲ್ಲ. ಬದಲಾಗಿ ಅವರು ಏನೆಲ್ಲ ಹೇಳಿದರು ಎಂಬುದನ್ನು ನೋಡೋಣ.

ಇದು ಉತ್ತಮ ಗೆಲುವು, ನಾವು ಈರೀತಿಯ ಜಯವನ್ನು ಎದುರು ನೋಡುತ್ತಿದ್ದೆವು. ಆದರೆ, ಬೌಲಿಂಗ್ನಲ್ಲಿ ನಮ್ಮ ಆರಂಭ ಉತ್ತಮವಾಗಿರಲಿಲ್ಲ. ಮಧ್ಯಮ-ಓವರ್‌ಗಳಲ್ಲಿ ನಮ್ಮ ಬೌಲರ್‌ಗಳು ಕಮ್ಬ್ಯಾಕ್ ಮಾಡಿದರು. ಈ ಎಲ್ಲಾ ಪಂದ್ಯಗಳಲ್ಲಿ ನಮ್ಮ ಫೀಲ್ಡಿಂಗ್ ಅದ್ಭುತವಾಗಿತ್ತು. ಇದು ನಿಮ್ಮ ನಿಯಂತ್ರಣದಲ್ಲಿದೆ ಎಂಬುದು ತೋರುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಬೌಲರ್‌ಗಳು ನಾವು ಯಾವ ಲೆಂತ್ನಲ್ಲಿ ಬೌಲ್ ಮಾಡಬೇಕೆಂದು ಅರ್ಥಹಿಸಿ ಬೌಲ್ ಮಾಡಿದ್ದರು. ಜಡೇಜಾ ಬಾಲ್ ಮತ್ತು ಕ್ಯಾಚ್‌ನಲ್ಲಿ ಅದ್ಭುತವಾಗಿದ್ದರು. ನಾವು ಒಂದು ಗುಂಪಿನಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಮೈದಾನದಲ್ಲಿನ ಒಳ್ಳೆಯ ಪ್ರದರ್ಶನ ನೀಡಿದವರಿಗೆ ಪದಕ ಕೊಡುತ್ತೇವೆ. ಇದು ಪ್ರತಿಯೊಬ್ಬರನ್ನು ಪ್ರೇರೇಪಿಸುತ್ತದೆ - ರೋಹಿತ್ ಶರ್ಮಾ.

ಹಾರ್ದಿಕ್ ಇಂಜುರಿ ಬಗ್ಗೆ ಮಾತನಾಡಿದ ರೋಹಿತ್, ಅವರಿಗೆ ಸ್ವಲ್ಪ ನೋವಿದೆ. ಚಿಂತೆ ಮಾಡುವಂತದ್ದೇನು ಇಲ್ಲ. ನಾಳೆ (ಇಂದು) ಬೆಳಿಗ್ಗೆ ಅವರ ಗಾಯ ಹೇಗಿದೆ ಎಂದು ನೋಡುತ್ತೇವೆ. ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಪಾಂಡ್ಯ ಇಂಜುರಿಯ ಬಗ್ಗೆ ಮಾಹಿತಿ ನೀಡಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಕಲೆಹಾಕಿತು. ಲಿಟನ್ ದಾಸ್ 66, ತಂಝಿದ್ ಹಸನ್ 51 ರನ್ ಬಾರಿಸಿದರೆ, ಅಂತಿಮ ಹಂತದಲ್ಲಿ ಮೊಹಮ್ಮದುಲ್ಲ 46 ರನ್ ಸಿಡಿಸಿದರು. ಭಾರತ ಪರ ಬುಮ್ರಾ, ಸಿರಾಜ್ ಹಾಗೂ ಜಡೇಜಾ ತಲಾ 2 ವಿಕೆಟ್ ಪಡೆದರು.

257 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ 41.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 261 ರನ್ ಸಿಡಿಸಿ ಜಯ ಸಾಧಿಸಿತು. ವಿರಾಟ್ ಕೊಹ್ಲಿ 97 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸಿದರೆ, ಶುಭ್ಮನ್ ಗಿಲ್ 53 ಹಾಗೂ ನಾಯಕ ರೋಹಿತ್ ಶರ್ಮಾ 48 ರನ್ ಸಿಡಿಸಿದರು. ಕೆಎಲ್ ರಾಹುಲ್ ಅಜೇಯ 34 ರನ್ ಗಳಿಸಿದರು.