
ಆಸ್ಟ್ರೇಲಿಯಾ ಪ್ರವಾಸದ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಯಲ್ಲಿ ಆರಂಭಿಕನಾಗಿ ಅಬ್ಬರಿಸಿದ್ದ ರೋಹಿತ್ ಶರ್ಮಾ, ಕಿವೀಸ್ ವಿರುದ್ಧದ ಸರಣಿಯಲ್ಲಿ ಮಾತ್ರ ಎಡವಿದ್ದಾರೆ. ಇಷ್ಟು ದಿನ ಹೊಡಿಬಡಿ ಆಟದ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಡುತ್ತಿದ್ದ ರೋಹಿತ್, ನ್ಯೂಜಿಲೆಂಡ್ ವಿರುದ್ಧ ಮಾತ್ರ ತಾಳ್ಮೆಯ ಆಟದ ಮೊರೆ ಹೋಗಿದ್ದಾರೆ. ಅಂತಿಮವಾಗಿ ಒತ್ತಡಕ್ಕೊಳಗಾಗಿ ವಿಕೆಟ್ ಕೈಚೆಲ್ಲುತ್ತಿದ್ದಾರೆ.

ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 26 ರನ್ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದ್ದ ರೋಹಿತ್, ಇದೀಗ ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲೂ 24 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ರೋಹಿತ್ ಶರ್ಮಾ ಉತ್ತಮ ಆರಂಭ ಪಡೆದುಕೊಂಡ ಬಳಿಕ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಅದರಲ್ಲೂ ಸಾಧಾರಣ ಎಸೆತಕ್ಕೆ ರೋಹಿತ್ ವಿಕೆಟ್ ಪತನವಾಗುತ್ತಿರುವುದು ತಂಡಕ್ಕೆ ಆಘಾತ ತಂದಿದೆ.

ರೋಹಿತ್ ಶರ್ಮಾ ಮೈದಾನದಲ್ಲಿ ಸೆಟೆದು ನಿಂತರೆ ರನ್ಗಳ ಮಳೆ ಹೇಗೆ ಹರಿಯುತ್ತದೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಆದರೆ ವಡೋದರಾ ಮತ್ತು ರಾಜ್‌ಕೋಟ್‌ನಲ್ಲಿ ರೋಹಿತ್ ಬ್ಯಾಟಿಂಗ್ ಮಾಡಿದ ರೀತಿ ಎಲ್ಲರ ಅಚ್ಚರಿಗೆ ಕಾರಣವಾಯಿತು. ರಾಜ್‌ಕೋಟ್‌ನಲ್ಲಿ, ರೋಹಿತ್ 37 ಎಸೆತಗಳನ್ನು ಆಡಿ 24 ರನ್ ಗಳಿಸಿದ್ದರು.

ಆದರೆ ಎದುರಿಸಿದ ಎಸೆತಗಳಿಗೂ ಗಳಿಸಿದ ರನ್ಗೂ ಅಂತರ ಹೆಚ್ಚಿದ್ದರಿಂದ ರನ್ ವೇಗ ಹೆಚ್ಚಿಸಲು ಪ್ರಯತ್ನಿಸಿದ ರೋಹಿತ್ ಮಿಡ್-ಆಫ್‌ನಲ್ಲಿ ಬೃಹತ್ ಸಿಕ್ಸರ್ ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಸ್ವೀಪರ್ ಕವರ್‌ನಲ್ಲಿ ನಿಂತಿದ್ದ ವಿಲ್ ಯಂಗ್ ಅವರ ಕೈಸೇರಿತು. ರೋಹಿತ್ ಸ್ವತಃ ತಮ್ಮ ಹೊಡೆತದಿಂದ ನಿರಾಶೆಗೊಂಡಂತೆ ಕಂಡುಬಂದರು. ಅವರ ಸ್ಟ್ರೈಕ್ ರೇಟ್ ಕೇವಲ 63.16 ಆಗಿದ್ದು, ವಿಮರ್ಶಕರಿಂದ ಟೀಕೆಗೆ ಕಾರಣವಾಯಿತು.

ರೋಹಿತ್ ಶರ್ಮಾ ನಾಯಕನಾಗಿದ್ದಾಗ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದರು, ಆದರೆ ಈಗ ಅವರು ಮತ್ತೆ ನಿಧಾನವಾಗಿ ಆರಂಭಿಸುತ್ತಿದ್ದಾರೆ. ರಾಜ್‌ಕೋಟ್‌ನಲ್ಲಿ, ಅವರು 11 ನೇ ಎಸೆತದಲ್ಲಿ ತಮ್ಮ ಖಾತೆಯನ್ನು ತೆರೆದರು. ನಂತರ ನಾಲ್ಕು ಬೌಂಡರಿಗಳನ್ನು ಹೊಡೆಯುವ ಮೂಲಕ ತಮ್ಮ ಸ್ಟ್ರೈಕ್ ರೇಟ್ ಸುಧಾರಿಸಿಕೊಂಡರೂ, ಮತ್ತೆ ರನ್ಗಾಗಿ ಹೆಣಗಾಡಲಾರಂಭಿಸಿದರು.

ಇದರಿಂದ ಮತ್ತೆ ತಮ್ಮ ಸ್ಟ್ರೈಕ್ ರೇಟ್ ಸುಧಾರಿಸಲು ಪ್ರಯತ್ನಿಸಿದ ರೋಹಿತ್ ಶರ್ಮಾ ಸಾಧಾರಣ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ರೋಹಿತ್ ತಮ್ಮ ಕೊನೆಯ ಮೂರು ಲಿಸ್ಟ್ ಎ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರಾಖಂಡ್ ವಿರುದ್ಧವೂ ರೋಹಿತ್ಗೆ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಈಗ ಅವರು ನ್ಯೂಜಿಲೆಂಡ್ ವಿರುದ್ಧ 26 ಮತ್ತು 24 ರನ್‌ಗಳಿಸಿ ಔಟಾಗಿದ್ದಾರೆ.