ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಂಡಿದ್ದಾರೆ. ಅಂದರೆ ಬರೋಬ್ಬರಿ 14 ತಿಂಗಳುಗಳ ಬಳಿಕ ಇಬ್ಬರು ದಿಗ್ಗಜರು ಮತ್ತೆ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದರೊಂದಿಗೆ ಮುಂಬರುವ ಟಿ20 ವಿಶ್ವಕಪ್ನಲ್ಲೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಟಿ20 ವರ್ಲ್ಡ್ಕಪ್ ಹಿನ್ನಲೆಯಲ್ಲೇ ಈ ಇಬ್ಬರು ಆಟಗಾರರನ್ನು ಟಿ20 ತಂಡಕ್ಕೆ ಮತ್ತೆ ಆಯ್ಕೆ ಮಾಡಲಾಗಿದೆ. ಹೀಗಾಗಿ ರೋಹಿತ್ ಶರ್ಮಾ ಸಾರಥ್ಯದಲ್ಲೇ ಟಿ20 ವಿಶ್ವಕಪ್ನಲ್ಲೂ ಭಾರತ ತಂಡ ಕಣಕ್ಕಿಳಿಯಲಿದೆ.
ಅತ್ತ ಕಳೆದ ಒಂದು ವರ್ಷದಿಂದ ಟಿ20 ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಸೈಡ್ಲೈನ್ಗೆ ಸರಿಯಲಿದ್ದಾರೆ. ಅಂದರೆ ಪಾಂಡ್ಯ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಇರಾದೆಯಲ್ಲಿದ್ದರು.
ಆದರೀಗ ರೋಹಿತ್ ಶರ್ಮಾ ಅವರ ರಿಎಂಟ್ರಿಯೊಂದಿಗೆ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಹಾರ್ದಿಕ್ ಪಾಂಡ್ಯ ಅವರ ಕನಸು ಭಗ್ನಗೊಂಡಿದೆ. ಅಷ್ಟೇ ಅಲ್ಲದೆ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಸಂಪೂರ್ಣ ಫಿಟ್ನೆಸ್ ಸಾಬೀತುಪಡಿಸಬೇಕಾದ ಅನಿವಾರ್ಯತೆ ಹಾರ್ದಿಕ್ ಪಾಂಡ್ಯ ಮುಂದಿದೆ.
ಒಟ್ಟಿನಲ್ಲಿ ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗೂ ಮುನ್ನ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಕಂಬ್ಯಾಕ್ ಟೀಮ್ ಇಂಡಿಯಾ ಪಾಲಿಗೆ ಶುಭ ಸೂಚನೆ ಎನ್ನಬಹುದು. ಈ ಶುಭ ಸೂಚನೆಯೊಂದಿಗೆ ಈ ಬಾರಿ ಭಾರತ ತಂಡ ವರ್ಲ್ಡ್ಕಪ್ ಮುಡಿಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಕೇಶ್ ಕುಮಾರ್.