RCB Womens Team: ಪುರುಷರಿಗಿಂತ ಬಲಿಷ್ಠವಾಗಿದೆ ಬೆಂಗಳೂರು ಮಹಿಳಾ ತಂಡ: ಇಲ್ಲಿದೆ ನೋಡಿ ಆರ್ಸಿಬಿ ಪ್ಲೇಯಿಂಗ್ XI
TV9 Web | Updated By: Vinay Bhat
Updated on:
Feb 14, 2023 | 10:20 AM
WPL 2023, RCB Women Playing XI: ಮಹಿಳಾ ಪ್ರೀಪಿಯರ್ ಲೀಗ್ ಆಕ್ಷನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ಆಟಗಾರ್ತಿಯರಿಗಾಗಿ ಕೋಟಿ ಕೋಟಿ ಹಣ ಸುರಿದಿದೆ. ಹಾಗಾದರೆ ಆರ್ಸಿಬಿ ಮಹಿಳಾ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡೋಣ.
1 / 9
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಮನೋರಂಜನೆ ನೀಡುವ ಫ್ರಾಂಚೈಸಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಸ್ಥಾನದಲ್ಲಿ ನಿಲ್ಲುತ್ತೆ. ಇದೀಗ ಆರ್ಸಿಬಿ ಮಹಿಳಾ ಪ್ರೀಮಿಯರ್ ಲೀಗ್ಗೂ ಕಾಲಿಟ್ಟಿದ್ದು ಇಲ್ಲೂ ಮೋಡಿ ಮಾಡಲು ತಯಾರಾಗಿದೆ. ಅಂದುಕೊಂಡಂತೆ ಡಬ್ಲ್ಯೂಪಿಎಲ್ 2023 ಆಕ್ಷನ್ನಲ್ಲಿ ಆರ್ಸಿಬಿ ಟಾಪ್ ಪ್ಲೇಯರ್ಗಳನ್ನು ಖರೀದಿಸಿದೆ.
2 / 9
ಮಹಿಳಾ ಪ್ರೀಮಿಯರ್ ಲೀಗ್ 2023ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 18 ಮಹಿಳಾ ಆಟಗಾರ್ತಿಯರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಇದರಲ್ಲಿ ಸ್ಮೃತಿ ಮಂಧಾನ ಅವರನ್ನು 3.4 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದು ಈಗ ಇತಿಹಾಸ. ಡಬ್ಲ್ಯೂಪಿಎಲ್ ಚೊಚ್ಚಲ ಆವೃತ್ತಿಯಲ್ಲೇ ಗರಿಷ್ಠ ಮೊತ್ತಕ್ಕೆ ಸೇಲ್ ಆದ ಆಟಗಾರ್ತಿ ಎಂಬ ದಾಖಲೆ ಮಂಧಾನ ಪಾಲಾಯಿತು.
3 / 9
18 ಆಟಗಾರ್ತಿಯರಿಗಾಗಿ ಕೋಟಿ ಕೋಟಿ ಹಣ ಸುರಿದಿರುವ ಆರ್ಸಿಬಿ 12 ಭಾರತೀಯ ಪ್ಲೇಯರ್ಸ್ ಮತ್ತು 6 ವಿದೇಶಿ ಆಟಗಾರ್ತಿಯರನ್ನು ಖರೀದಿಸಿತು. ಬೆಂಗಳೂರು ಕೈಯಲ್ಲಿ ಉಳಿದಿರುವುದು ಕೇವಲ 10 ಲಕ್ಷ ರೂಪಾಯಿ ಮಾತ್ರ. ಆರ್ಸಿಬಿ ಪುರುಷ ತಂಡಕ್ಕೆ ಹೋಲಿಸಿದರೆ ಮಹಿಳಾ ತಂಡವೇ ಬಲಿಷ್ಠವಾಗಿದ್ದು ಸ್ಟಾರ್ ಆಟಗಾರ್ತಿಯರಿಂದ ಕೂಡಿದೆ.
4 / 9
ಹಾಗಾದರೆ ಮುಂಬರುವ ಮಾರ್ಚ್ ತಿಂಗಳಿನಲ್ಲಿ ನಡೆಯುವ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಮಹಿಳಾ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡೋಣ.
5 / 9
ಆರ್ಸಿಬಿ ಪರ ಓಪನರ್ ಆಗಿ ಸ್ಮೃತಿ ಮಂಧಾನ ಕಣಕ್ಕಿಳಿಯವುದು ಖಚಿತ. ಇವರ ಜೊತೆಗೆ ನ್ಯೂಜಿಲೆಂಡ್ ತಂಡದ ನಾಯಕಿ, ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಇಂಗ್ಲೆಂಡ್ನ ಹೆದರ್ ನೈಟ್ ಆಡಲಿದ್ದಾರೆ.
6 / 9
ಎಲಿಸ್ಸಾ ಪೆರಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದರೆ ಐದನೇ ಸ್ಥಾನಕ್ಕೆ ಹೇಳಿ ಮಾಡಿಸಿದ ಆಟಗಾರ್ತಿ ರಿಚಾ ಘೋಷ್ ಇದ್ದಾರೆ. ಆರನೇ ಕ್ರಮಾಂಕದಲ್ಲಿ ದಿಶಾ ಕಸತ್ ಆಡಬಹುದು. ನಂತರದಲ್ಲಿ ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಪ್ರೀತಿ ಬೋಸ್, ಮೇಗನ್ ಶುಟ್ ಹಾಗೂ ರೇಣುಕಾ ಸಿಂಗ್ ಕಣಕ್ಕಿಳಿಯಬಹುದು.
7 / 9
ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ನಂತೆ ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಕೇವಲ ನಾಲ್ಕು ವಿದೇಶಿ ಪ್ಲೇಯರ್ಸ್ ಮಾತ್ರ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬೇಕು. ಆರ್ಸಿಬಿ ಖರೀದಿಸಿರುವ ವಿದೇಶಿ ಆಟಗಾರರ ಪೈಕಿ ಹೆಚ್ಚಿನವರು ಆಲ್ರೌಂಡರ್ಗಳಾಗಿದ್ದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
8 / 9
ಸಂಪೂರ್ಣ ಮಹಿಳಾ ಆರ್ಸಿಬಿ ತಂಡ: ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲಿಸ್ಸಾ ಪೆರಿ, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಆಶಾ ಶೋಬನಾ, ಹೆದರ್ ನೈಟ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಡೇನ್ ವ್ಯಾನ್ ನೀಕರ್ಕ್, ಪ್ರೀತಿ ಬೋಸ್, ಮೇಗನ್ ಶುಟ್, ಸಹನಾ ಪವಾರ್, ಪೂನಮ್ ಖೇಮ್ನಾರ್, ಕೋಮಲ್ ಝಂಜಾದ್.
9 / 9
ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಮುಂದಿನ ತಿಂಗಳು ಮಾರ್ಚ್ 4ರಿಂದ 24ರವರೆಗೆ ಮುಂಬೈನಲ್ಲಿ ನಡೆಯಲಿದ್ದು, ಐದು ಬಲಿಷ್ಠ ತಂಡಗಳು ಟ್ರೋಫಿಗಾಗಿ ಹೋರಾಟ ನಡೆಸಲಿವೆ. ಇದುವರೆಗೆ ಪುರುಷರ ಐಪಿಎಲ್ನಲ್ಲಿ ಕಪ್ ಗೆಲ್ಲದ ಆರ್ಸಿಬಿ ಮಹಿಳಾ ತಂಡದ ಮೂಲಕವಾದರೂ ಕಪ್ ಎತ್ತಿ ಹಿಡಿಯುತ್ತಾ ನೋಡಬೇಕಿದೆ.
Published On - 10:20 am, Tue, 14 February 23