
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜಾನಿ ಬೈರ್‌ಸ್ಟೋವ್ (Jonny Bairstow) ಮುಂಬರುವ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ (JSK) ಪರ ಕಣಕ್ಕಿಳಿಯಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಲೀಕತ್ವದ JSK ತಂಡವು ವಿದೇಶಿ ಆಟಗಾರರ ಪಟ್ಟಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಬೈರ್‌ಸ್ಟೋವ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಜೋಬರ್ಗ್ ಸೂಪರ್ ಕಿಂಗ್ಸ್ ತಂಡವನ್ನು ಸಿಎಸ್ಕೆ ತಂಡದ ಮಾಜಿ ಆಟಗಾರ ಫಾಫ್ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುತ್ತಿರುವ ಡುಪ್ಲೆಸಿಸ್ ಮೇಜರ್ ಲೀಗ್ ಕ್ರಿಕೆಟ್ (ಅಮೆರಿಕ) ಟೂರ್ನಿಯಲ್ಲಿ ಸಿಎಸ್ಕೆ ಮಾಲೀಕತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಹಾಗೆಯೇ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ.

ಇನ್ನು ಫಾಫ್ ಮುಂದಾಳತ್ವದ ಈ ತಂಡದಲ್ಲಿ ವಿದೇಶಿ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ನ ಆಲ್ರೌಂಡರ್ ಮೊಯೀನ್ ಅಲಿ, ಶ್ರೀಲಂಕಾ ಸ್ಪಿನ್ನರ್ ಮಹೀಶ್ ತೀಕ್ಷಣ, ನ್ಯೂಝಿಲೆಂಡ್ ವೇಗಿ ನಾಂಡ್ರೆ ಬರ್ಗರ್, ನಮೀಬಿಯಾದ ಡೇವಿಡ್ ವೀಝ ಹಾಗೂ ಇಂಗ್ಲೆಂಡ್ನ ಜಾನಿ ಬೈರ್‌ಸ್ಟೋವ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಈ ತಂಡದಲ್ಲಿ ಅನುಭವಿ ಆಟಗಾರ ಇಮ್ರಾನ್ ತಾಹಿರ್ ಕೂಡ ಇರುವುದು ವಿಶೇಷ.

ಜೋಬರ್ಗ್ ಸೂಪರ್ ಕಿಂಗ್ಸ್ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಮೊಯೀನ್ ಅಲಿ, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಜೆರಾಲ್ಡ್ ಕೋಟ್ಝಿ, ಡೇವಿಡ್ ವೀಝ, ಲಿಯುಸ್ ಡು ಪ್ಲೂಯ್, ಲಿಝಾಡ್ ವಿಲಿಯಮ್ಸ್, ನಾಂಡ್ರೆ ಬರ್ಗರ್, ಡೊನೊವನ್ ಫೆರೇರಾ, ಸಿಬೊನೆಲೊ ಮಖನ್ಯಾ, ತಬ್ರೇಝ್ ಶಮ್ಸಿ, ಮಹೀಶ್ ತೀಕ್ಷಣ, ಇಮ್ರಾನ್ ತಾಹಿರ್.

ಸೌತ್ ಆಫ್ರಿಕಾ ಟಿ20 ಯಾವಾಗ ಶುರು?- ಜೋಬರ್ಗ್ ಸೂಪರ್ ಕಿಂಗ್ಸ್, ಎಂಐ ಕೇಪ್ಟೌನ್, ಸನ್ರೈಸರ್ಸ್ ಈಸ್ಟರ್ನ್ ಕೇಪ್, ಪ್ರಿಟೊರಿಯಾ ಕ್ಯಾಪಿಟಲ್ಸ್, ಡರ್ಬನ್ ಸೂಪರ್ ಜೈಂಟ್ಸ್, ಪಾರ್ಲ್ ರಾಯಲ್ಸ್ ತಂಡಗಳನ್ನು ಒಳಗೊಂಡಿರುವ SA20 ಟೂರ್ನಿಯು ಮುಂದಿನ ವರ್ಷ ಜನವರಿ 9 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಫೆಬ್ರವರಿ 8 ರಂದು ಜರುಗಲಿದೆ.