ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಏಕದಿನ ಪಂದ್ಯವು ಟೈನಲ್ಲಿ ಅಂತ್ಯವಾಗಿದೆ. ಈ ಟೈ ಫಲಿತಾಂಶದೊಂದಿಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದೆ. ಅಂದರೆ ಏಕದಿನ ಕ್ರಿಕೆಟ್ನಲ್ಲಿ ಅತೀ ಟೈ ಪಂದ್ಯಗಳನ್ನಾಡಿದ ತಂಡಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ 2ನೇ ಸ್ಥಾನಕ್ಕೇರಿದೆ.
ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವು ಮೊದಲ ಬಾರಿಗೆ ಟೈ ಕಂಡಿದ್ದು 1991 ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 126 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಮ್ಯಾಚ್ ಅನ್ನು ಟೈ ಮಾಡಿಕೊಂಡಿತು. ಅಲ್ಲಿಂದ ಶುರುವಾದ ಟೈ ಇದೀಗ ಶ್ರೀಲಂಕಾ ವಿರುದ್ಧದ ಸರಣಿವರೆಗೆ ಬಂದು ನಿಂತಿದೆ.
ಇದರ ನಡುವೆ ಭಾರತ ತಂಡವು ಒಟ್ಟು 10 ಪಂದ್ಯಗಳಲ್ಲಿ ಟೈ ಸಾಧಿಸಿದೆ. ಅಂದರೆ ಟೀಮ್ ಇಂಡಿಯಾ ಈವರೆಗೆ 1056 ಏಕದಿನ ಪಂದ್ಯಗಳನ್ನಾಡಿದ್ದು, ಈ ವೇಳೆ 559 ಪಂದ್ಯಗಳಲ್ಲಿ ಜಯ ಸಾಧಿಸಿದರೆ 443 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು ಹತ್ತು ಪಂದ್ಯಗಳನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅತೀ ಹೆಚ್ಚು ಟೈ ಪಂದ್ಯಗಳನ್ನಾಡಿದ ವಿಶ್ವದ 2ನೇ ತಂಡ ಎನಿಸಿಕೊಂಡಿದೆ.
ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಆಸೀಸ್ ಪಡೆಯು ಏಕದಿನ ಕ್ರಿಕೆಟ್ನಲ್ಲಿ ಒಟ್ಟು 1000 ಪಂದ್ಯಗಳನ್ನಾಡಿದೆ. ಈ ವೇಳೆ 609 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, 348 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇದರ ನಡುವೆ ಆಸೀಸ್ ಪಡೆ 9 ಪಂದ್ಯಗಳನ್ನು ಟೈ ಮಾಡಿಕೊಂಡಿತು.
ಇದೀಗ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಟೈ ಮಾಡಿಕೊಳ್ಳುವ ಮೂಲಕ ಭಾರತ ತಂಡವು ಆಸ್ಟ್ರೇಲಿಯಾದ (9 ಬಾರಿ) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು 2ನೇ ಸ್ಥಾನಕ್ಕೇರಿದೆ. ಈ ಮೂಲಕ ಟೈ ದಾಖಲೆಗಳ ಪಟ್ಟಿಯಲ್ಲೂ ಟೀಮ್ ಇಂಡಿಯಾ ಮೊದಲ ಸ್ಥಾನಕ್ಕೇರುವ ಹಂತದಲ್ಲಿದೆ.
ಅಂದಹಾಗೆ ಏಕದಿನ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಟೈ ನಲ್ಲಿ ಅಂತ್ಯಗೊಳಿಸಿದ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿದೆ. 874 ಏಕದಿನ ಪಂದ್ಯಗಳನ್ನಾಡಿರುವ ವೆಸ್ಟ್ ಇಂಡೀಸ್ 420 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 412 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇದರ ನಡುವೆ 11 ಪಂದ್ಯಗಳನ್ನು ಟೈ ಮಾಡಿಕೊಂಡಿತ್ತು ಎಂಬುದು ವಿಶೇಷ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಟೈ ಪಂದ್ಯಗಳನ್ನಾಡಿದ ವಿಶೇಷ ವಿಶ್ವ ದಾಖಲೆಯನ್ನು ವಿಂಡೀಸ್ ಪಡೆ ನಿರ್ಮಿಸಿದೆ.
Published On - 9:31 am, Sat, 3 August 24