ಜೋಹಾನ್ಸ್ಬರ್ಗ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಟೀಮ್ ಇಂಡಿಯಾ ಎಡಗೈ ದಾಂಡಿಗ ಸಾಯಿ ಸುದರ್ಸನ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸುವ ಮೂಲಕ ಎಂಬುದು ವಿಶೇಷ.
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಸನ್ 43 ಎಸೆತಗಳಲ್ಲಿ 9 ಫೋರ್ಗಳೊಂದಿಗೆ 55 ರನ್ ಬಾರಿಸಿದ್ದರು. ಇದರೊಂದಿಗೆ ಪಾದಾರ್ಪಣೆ ಪಂದ್ಯದಲ್ಲೇ 50+ ಸ್ಕೋರ್ಗಳಿಸಿದ ಟೀಮ್ ಇಂಡಿಯಾ ಆರಂಭಿಕರ ಪಟ್ಟಿಗೆ ಸಾಯಿ ಹೆಸರು ಸೇರ್ಪಡೆಯಾಯಿತು.
ಇದಕ್ಕೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿರುವುದು ಕೇವಲ ಮೂವರು ಆರಂಭಿಕರು ಮಾತ್ರ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕನ್ನಡಿಗ ರಾಬಿನ್ ಉತ್ತಪ್ಪ ಎಂಬುದು ವಿಶೇಷ.
2006 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಕೊಡಗಿನ ಕುವರ ರಾಬಿನ್ ಉತ್ತಪ್ಪ 86 ರನ್ ಬಾರಿಸಿ ಮಿಂಚಿದ್ದರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಪಂದ್ಯದಲ್ಲೇ 50+ ಸ್ಕೋರ್ಗಳಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಎಂಬ ದಾಖಲೆ ಉತ್ತಪ್ಪ ಪಾಲಾಯಿತು.
ಇದಾದ ಬಳಿಕ ಈ ಸಾಧನೆ ಮಾಡಿದ 2ನೇ ಬ್ಯಾಟರ್ ಕನ್ನಡಿಗ ಕೆಎಲ್ ರಾಹುಲ್. 2016 ರಲ್ಲಿ ಝಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ್ದ ಕೆಎಲ್ ರಾಹುಲ್ ಅಜೇಯ ಶತಕ ಬಾರಿಸಿ ಮಿಂಚಿದ್ದರು. ಈ ಮೂಲಕ ಭಾರತದ ಪರ ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಕೆಎಲ್ ರಾಹುಲ್ ತಮ್ಮದಾಗಿಸಿಕೊಂಡಿದ್ದರು.
ಇನ್ನು ಈ ಸಾಧನೆ ಮಾಡಿದ ಮೂರನೇ ಬ್ಯಾಟರ್ ಫೈಝ್ ಫಝಲ್. 2016 ರಲ್ಲಿ ಝಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚೊಚ್ಚಲ ಪಂದ್ಯವಾಡಿದ್ದ ಫಝಲ್ 55 ರನ್ಗಳ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಮೂಲಕ ಮೊದಲ ಏಕದಿನ ಪಂದ್ಯದಲ್ಲೇ 50+ ಸ್ಕೋರ್ಗಳಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದರು.
ಇದೀಗ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಜೇಯ 55 ರನ್ ಬಾರಿಸುವ ಮೂಲಕ ಸಾಯಿ ಸುದರ್ಸನ್ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ.
Published On - 8:03 am, Mon, 18 December 23