
ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾದ ಟೀಮ್ ಇಂಡಿಯಾ ಕುರಿತು ಇದೀಗ ಅಪಸ್ವರಗಳು ಕೇಳಿ ಬರಲಾರಂಭಿಸಿದೆ. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಕೈ ಬಿಟ್ಟಿರುವ ಬಗ್ಗೆ ಪ್ರಶ್ನೆಗಳೆದ್ದಿವೆ. ಇದಕ್ಕೆ ಮುಖ್ಯ ಕಾರಣ ರಾಹುಲ್ಗಿಂತ ಕಳಪೆ ಪ್ರದರ್ಶನ ನೀಡಿರುವ ಆಟಗಾರರನ್ನು ಆಯ್ಕೆ ಮಾಡಿರುವುದು.

ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಯ್ಕೆ ಮಾಡಲಾಗಿದೆ. ಆದರೆ ಟಿ20 ಕ್ರಿಕೆಟ್ನಲ್ಲಿನ ಸ್ಯಾಮ್ಸನ್ ಅವರ ಪ್ರದರ್ಶನ ಅತ್ಯಂತ ಕಳಪೆ ಮಟ್ಟದಲ್ಲಿದೆ.

ಟೀಮ್ ಇಂಡಿಯಾ ಪರ 21 ಟಿ20 ಇನಿಂಗ್ಸ್ ಆಡಿರುವ ಸಂಜು ಸ್ಯಾಮ್ಸನ್ ಕಲೆಹಾಕಿರುವುದು ಕೇವಲ 374 ರನ್ಗಳು ಮಾತ್ರ. ಈ ಇಪ್ಪತ್ತೊಂದು ಇನಿಂಗ್ಸ್ಗಳಲ್ಲಿ 1 ಅರ್ಧಶತಕ ಬಾರಿಸಲಷ್ಟೇ ಶಕ್ತರಾಗಿದ್ದಾರೆ. ಅಂದರೆ ಟಿ20 ಕ್ರಿಕೆಟ್ನಲ್ಲಿ ಸಂಜು ಸ್ಯಾಮ್ಸನ್ ಕೇವಲ 19.68 ಸರಾಸರಿ ಮಾತ್ರ ಹೊಂದಿದ್ದಾರೆ.

ಇನ್ನು ಭಾರತದ ಪರ 68 ಟಿ20 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ 2265 ರನ್ ಕಲೆಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 22 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಂದರೆ ಟಿ20 ಕ್ರಿಕೆಟ್ನಲ್ಲಿ ಕೆಎಲ್ ರಾಹುಲ್ 37.75 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಇಲ್ಲಿ ಕೇವಲ 19.68 ಸರಾಸರಿ ಹೊಂದಿರುವ ಸಂಜು ಸ್ಯಾಮ್ಸನ್ ಅವರನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಹಾಗೆಯೇ 37.75 ಸರಾಸರಿ ಹೊಂದಿರುವ ಕೆಎಲ್ ರಾಹುಲ್ ಅವರನ್ನು ಕೈ ಬಿಟ್ಟಿರುವುದೇಕೆ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಮುಂದಿಟ್ಟಿದ್ದಾರೆ.

ಒಟ್ಟಿನಲ್ಲಿ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಸಂಜು ಸ್ಯಾಮ್ಸನ್ಗೆ ನ್ಯಾಯ ಒದಗಿಸಲು ಮುಂದಾಗಿರುವ ಆಯ್ಕೆ ಸಮಿತಿ, ಕೆಎಲ್ ರಾಹುಲ್ಗೆ ಅನ್ಯಾಯ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಕೇಶ್ ಕುಮಾರ್.