- Kannada News Photo gallery Cricket photos Sanju Samson's T20 WC Woes: Chahal Slams Poor Form; Ishan Kishan Awaits Opportunity
ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಟ್ಟಿದ್ದು ಸಾಕು ಎಂದ ಯುಜ್ವೇಂದ್ರ ಚಾಹಲ್
Sanju Samson's T20 WC Woes:ಸಂಜು ಸ್ಯಾಮ್ಸನ್‌ರ ಕಳಪೆ ಪ್ರದರ್ಶನ ಟಿ20 ವಿಶ್ವಕಪ್ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯೂಜಿಲೆಂಡ್ ಸರಣಿಯಲ್ಲಿ ವೈಫಲ್ಯ ಕಂಡ ಸಂಜು ವಿರುದ್ಧ ಯುಜ್ವೇಂದ್ರ ಚಾಹಲ್ ಮತ್ತು ಪಾರ್ಥಿವ್ ಪಟೇಲ್ ಸೇರಿದಂತೆ ಅನೇಕ ಅನುಭವಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಶಾನ್ ಕಿಶನ್‌ಗೆ ಅವಕಾಶ ನೀಡಬೇಕೆಂಬ ಕೂಗು ಬಲವಾಗಿದ್ದು, ಸ್ಯಾಮ್ಸನ್‌ಗೆ ಇದು ಅಗ್ನಿಪರೀಕ್ಷೆಯಾಗಿದೆ.
Updated on: Jan 29, 2026 | 9:51 PM

2026 ರ ಟಿ20 ವಿಶ್ವಕಪ್ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಟೀಂ ಇಂಡಿಯಾ ಕೂಡ ಇದಕ್ಕೆ ತಯಾರಿ ಪೂರ್ಣಗೊಳಿಸಿದೆ. ಆದರೆ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರ ಕಳಪೆ ಪ್ರದರ್ಶನ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿಯೂ ಅವರ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಹೀಗಾಗಿ ಸಂಜು ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ.

ಅಭಿಮಾನಿಗಳಿಂದ ಹಿಡಿದು ಅನುಭವಿ ಆಟಗಾರರು ಕೂಡ ಸಂಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಅವರ ಸಾಲಿಗೆ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕೂಡ ಸೇರಿಕೊಂಡಿದ್ದಾರೆ. ಸಂಜು ಸ್ಯಾಮ್ಸನ್ ಅನುಭವಿ ಆಟಗಾರನಾಗಿರುವುದರಿಂದ ಅವರು ಯಾವುದೇ ನೆಪಗಳನ್ನು ಹೇಳಲು ಸಾಧ್ಯವಿಲ್ಲ ಎಂದು ಯುಜ್ವೇಂದ್ರ ಚಾಹಲ್ ಹೇಳಿದ್ದಾರೆ.

ಯುಜುವೇಂದ್ರ ಚಾಹಲ್ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಬಗ್ಗೆ ಹೇಳಿಕೆ ನೀಡಿದ್ದು, ಸಂಜು ಸ್ಯಾಮ್ಸನ್ ಅವರ ವೈಫಲ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘ಒಂದು ಅಥವಾ ಎರಡು ಪಂದ್ಯಗಳಲ್ಲಿ ವಿಫಲರಾಗುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ನಾಲ್ಕು ಪಂದ್ಯಗಳಲ್ಲಿ ಅಲ್ಲ. ಸಂಜು ಸ್ಯಾಮ್ಸನ್ 10-12 ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಒತ್ತಡವು ಅವರಿಗೆ ಒಂದು ನೆಪವಾಗಬಾರದು’ ಎಂದು ಚಾಹಲ್ ಹೇಳಿದ್ದಾರೆ

ಯುಜ್ವೇಂದ್ರ ಚಾಹಲ್ ಮಾತ್ರವಲ್ಲ, ಪಾರ್ಥಿವ್ ಪಟೇಲ್ ಕೂಡ ಸಂಜು ಸ್ಯಾಮ್ಸನ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ‘ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್‌ಗಿಂತ ಟೀಂ ಇಂಡಿಯಾ ಇಶಾನ್ ಕಿಶನ್‌ಗೆ ಆದ್ಯತೆ ನೀಡಬೇಕು. ಸಂಜುಗಿಂತ ಇಶಾನ್ ಕಿಶನ್ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಟೀಂ ಇಂಡಿಯಾ ಇದನ್ನು ಗಮನದಲ್ಲಿಟ್ಟುಕೊಂಡು ಟಿ20 ವಿಶ್ವಕಪ್‌ಗೆ ಪ್ರವೇಶಿಸಬೇಕು’ ಎಂದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ನಾಲ್ಕು ಟಿ20 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡಿಲ್ಲ. ನಾಗ್ಪುರದಲ್ಲಿ ನಡೆದ ಟಿ20 ಪಂದ್ಯದಲ್ಲಿ 10 ರನ್‌ಗಳಿಸಿ ಔಟಾಗಿದ್ದ ಸಂಜು ರಾಯ್‌ಪುರದಲ್ಲಿ 6 ರನ್ಗಳಿಗೆ ಸುಸ್ತಾಗಿದ್ದರು. ಗುವಾಹಟಿಯಲ್ಲಿ ಸಂಜುಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ವಿಶಾಖಪಟ್ಟಣದಲ್ಲಿ 24 ರನ್ ಬಾರಿಸಿ ಉತ್ತಮ ಆರಂಭ ಪಡೆದಿದ್ದ ಸಂಜು ಸೆಟ್ ಆದ ನಂತರ ಔಟಾದರು.

ಸಂಜು ಸ್ಯಾಮ್ಸನ್ ಈ ರೀತಿಯಾಗಿ ರನ್ ಬರ ಎದುರಿಸುತ್ತಿರುವುದು ಈ ಸರಣಿಯಲ್ಲಿ ಮಾತ್ರವಲ್ಲ. ಅವರ ಕೊನೆಯ 15 ಟಿ20 ಇನ್ನಿಂಗ್ಸ್‌ಗಳಲ್ಲಿ ಕೇವಲ 17.4 ಸರಾಸರಿ ಮತ್ತು 130 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ 262 ರನ್ ಮಾತ್ರ ಗಳಿಸಿದ್ದಾರೆ. ಹೀಗಾಗಿ ಸಂಜು ಅವರನ್ನು ವಿಶ್ವಕಪ್ ತಂಡದಿಂದ ಹೊರಗಿಟ್ಟು ಕಿಶನ್‌ಗೆ ಅವಕಾಶ ನೀಡಬೇಕು ಎಂಬ ಕೂಗು ಜೋರಾಗಿದೆ.
