
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟಿ20 ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಬರೋಬ್ಬರಿ 248 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಅಭಿಷೇಕ್ ಸ್ಫೋಟಕ ಶತಕ ಸಿಡಿಸಿದರು.

ಆದರೆ ಈ ಪಂದ್ಯದಲ್ಲಿ ತಂಡದ ಮತ್ತೊಬ್ಬ ಆರಂಭಿಕ ಸಂಜು ಸ್ಯಾಮ್ಸನ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಡಲಾಗಿತ್ತು. ಏಕೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಎರಡೆರಡು ಶತಕ ಸಿಡಿಸಿದ್ದ ಸಂಜು, ಇಂಗ್ಲೆಂಡ್ ವಿರುದ್ಧದ ಈ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶರಕವಿರಲಿ, ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಲಿಲ್ಲ.

ಸರಣಿಯ ಮೊದಲ ಪಂದ್ಯದಿಂದಲೂ ಸಂಜುಗೆ ಪವರ್ ಪ್ಲೇ ಮುಗಿಯುವರೆಗೂ ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಕೊನೆಯ ಪಂದ್ಯದಲ್ಲಾದರೂ ಸಂಜು ಬಿಗ್ ಇನ್ನಿಂಗ್ಸ್ ಆಡಿ ತಂಡದಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲಿ ಎಂಬುದು ಅಭಿಮಾನಿಗಳ ಆಶಯವಾಗಿತ್ತು. ಅದಕ್ಕೆ ಪೂರಕವಾಗಿ ಸಂಜು ಕೂಡ ಇನ್ನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು.

ಈ ಸಿಕ್ಸರ್ನ ವಿಶೇಷತೆ ಏನೆಂದರೆ, ಯಾವ ಶಾರ್ಟ್ ಬಾಲ್‌ಗೆ ಸಂಜು ಕೊನೆಯ ನಾಲ್ಕು ಪಂದ್ಯಗಳಲ್ಲಿ ವಿಕೆಟ್ ಕೈಚೆಲ್ಲಿದ್ದರೋ ಅದೇ ಶಾರ್ಟ್ ಬಾಲ್‌ಗೆ ಸಂಜು ಸಿಕ್ಸರ್ ಬಾರಿಸಿದರು. ಹೀಗಾಗಿ ಶಾರ್ಟ್ ಬಾಲ್ ಎದುರಿಸುವುದರ ಮೇಲೆ ಸಂಜು ಕೆಲಸ ಮಾಡಿರಬೇಕು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ಪಂದ್ಯದಲ್ಲೂ ಸಂಜು ಮತ್ತದೇ ಶಾರ್ಟ್ ಬಾಲ್‌ಗೆ ಸಂಜು ಬಲಿಯಾಗಬೇಕಾಯಿತು.

ಇಡೀ ಸರಣಿಯಲ್ಲಿ ಸಂಜು ಸ್ಯಾಮ್ಸನ್ರನ್ನು ಕಾಡಿದ ಚೋಫ್ರಾ ಆರ್ಚರ್ ಓವರ್‌ನಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಸಂಜು, ಮಾರ್ಕ್ ವುಡ್ ಬೌಲಿಂಗ್ನಲ್ಲಿ ತಮ್ಮ ಲಯ ಕಳೆದುಕೊಂಡರು. ಎರಡನೇ ಓವರ್‌ನಲ್ಲಿ ಬಂದ ಮಾರ್ಕ್ ವುಡ್ ಶಾರ್ಟ್ ಬಾಲ್ ಎಸೆದರು. ಇದನ್ನು ಸ್ಯಾಮ್ಸನ್ ಮತ್ತೆ ಪುಲ್ ಶಾಟ್ ಹೊಡೆದರು.

ಒಂದೇ ವ್ಯತ್ಯಾಸವೆಂದರೆ ಈ ಬಾರಿ ಫೀಲ್ಡರ್ ಅನ್ನು ಸ್ಕ್ವೇರ್ ಲೆಗ್ ಬೌಂಡರಿಯಲ್ಲಿ ಪೋಸ್ಟ್ ಮಾಡಲಾಗಿತ್ತು. ಸುಲಭ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಸ್ಯಾಮ್ಸನ್ ಅವರ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಈ ಮೂಲಕ ಸರಣಿಯ ಐದೂ ಪಂದ್ಯಗಳಲ್ಲಿ ಸ್ಯಾಮ್ಸನ್ ಶಾರ್ಟ್ ಬಾಲ್ ಗಳಿಗೆ ಮಾತ್ರ ಬಲಿಯಾದರು.