
ಅದ್ಭುತ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾದಿಂದ ಕಡೆಗಣಿಸಲ್ಪಟ್ಟಿರುವ ಸರ್ಫರಾಜ್ ಖಾನ್ ದೇಶಿ ಕ್ರಿಕೆಟ್ನಲ್ಲಿ ತಮ್ಮ ಅಮೋಘ ಆಟವನ್ನು ಮುಂದುವರೆಸಿದ್ದಾರೆ. 2026 ರ ಆವೃತ್ತಿಯ ರಣಜಿ ಟೂರ್ನಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿದಿರುವ ಸರ್ಫರಾಜ್ ಖಾನ್ ಮತ್ತೊಂದು ದ್ವಿಶತಕ ಬಾರಿಸುವ ಮೂಲಕ ಆಯ್ಕೆಗಾರರಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿದ್ದಾರೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮುಂಬೈ ಮತ್ತು ಆತಿಥೇಯ ಹೈದರಾಬಾದ್ ನಡುವಿನ ಎಲೈಟ್ ಗ್ರೂಪ್ ಡಿ ಪಂದ್ಯದ ಎರಡನೇ ದಿನದಂದು ಸರ್ಫರಾಜ್ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಪಂದ್ಯದ ಮೊದಲ ದಿನದಂದು ಶತಕದ ಜೊತೆಗೆ 142 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್, ತಂಡದ ನಾಯಕ ಸಿದ್ಧೇಶ್ ಲಾಡ್ ಅವರೊಂದಿಗೆ 249 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು. ಲಾಡ್ ಕೂಡ 104 ರನ್‌ಗಳಿಸಿ ಔಟಾದರು.

ಆದಾಗ್ಯೂ, ಎರಡನೇ ದಿನವೂ ತಮ್ಮ ಅಬ್ಬರ ಮುಂದುವರೆಸಿದ ಸರ್ಫರಾಜ್ ಬಂದ ತಕ್ಷಣ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಸರ್ಫರಾಕ್ ಕೇವಲ 206 ಎಸೆತಗಳಲ್ಲಿ ತಮ್ಮ ದ್ವಿಶತಕದ ಗಡಿ ದಾಟಿದರು. ಇದು ಸರ್ಫರಾಜ್ ಅವರ ಪ್ರಥಮ ದರ್ಜೆ ವೃತ್ತಿಜೀವನದ ಐದನೇ ದ್ವಿಶತಕವಾಗಿದ್ದು, ಇದು ಕೇವಲ 61 ಪಂದ್ಯಗಳಲ್ಲಿ ಮೂಡಿಬಂದಿದೆ.

ದ್ವಿಶತಕ ಬಾರಿಸಿದ ಬಳಿಕ ಹೊಡಿಬಡಿ ಆಟಕ್ಕೆ ಮುಂದಾದ ಸರ್ಫರಾಜ್ ಖಾನ್ ಅಂತಿಮವಾಗಿ 227 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. ಸರ್ಫರಾಜ್ ಕೇವಲ 219 ಎಸೆತಗಳಲ್ಲಿ 19 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಬಾರಿಸಿದರು. ಸರ್ಫರಾಜ್ ಈ ದ್ವಿಶತಕದ ನೆರವಿನಿಂದ ತಂಡವನ್ನು 488 ರನ್‌ಗಳ ಬೃಹತ್ ಮೊತ್ತಕ್ಕೆ ಮುನ್ನಡೆಸಿದ್ದರು.

ಮೇಲೆ ಹೇಳಿದಂತೆ ಈ ದ್ವಿಶತಕದ ಮೂಲಕ, ಸರ್ಫರಾಜ್ ಖಾನ್ ಮತ್ತೊಮ್ಮೆ ತನ್ನನ್ನು ನಿರ್ಲಕ್ಷಿಸಿದ್ದಕ್ಕಾಗಿ ಭಾರತೀಯ ತಂಡದ ಆಡಳಿತ ಮತ್ತು ಆಯ್ಕೆ ಸಮಿತಿಗೆ ತಕ್ಕ ಉತ್ತರ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸರ್ಫರಾಜ್ ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ. ಕಳೆದ ವರ್ಷ, ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿಯೂ ಅದ್ಭುತ ಶತಕ ಬಾರಿಸಿದ್ದರು. ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಶತಕ ಬಾರಿಸಿದ್ದರು. ಈಗ ರಣಜಿಯಲ್ಲಿ ಈ ದ್ವಿಶತಕದೊಂದಿಗೆ ಹೊಸ ವರ್ಷವನ್ನು ಅದ್ಭುತವಾಗಿ ಪ್ರಾರಂಭಿಸಿದ್ದಾರೆ.