
ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನಾಡಲಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಘಾತ ಎದುರಾಗಿದೆ. ಏಕೆಂದರೆ ತಂಡದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಗಾಯದ ಕಾರಣದಿಂದಾಗಿ ವಿಶ್ವಕಪ್ನಿಂದಲೇ ಹೊರಬಿದ್ದಿದ್ದಾರೆ. ಪ್ರತೀಕಾ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾದದ ಗಾಯಕ್ಕೆ ಒಳಗಾಗಿದ್ದರು. ಗಾಯ ಗಂಭೀರವಾಗಿದ್ದು, ಅವರನ್ನು ಟೂರ್ನಿಯಿಂದ ಹೊರಗಿಡಲಾಗಿದೆ.

ಪ್ರತೀಕಾ ರಾವಲ್ ಗಾಯಗೊಂಡ ಬಳಿಕ ಅವರ ಜಾಗಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬ ಪ್ರಶ್ನೆಗಳು ಮೂಡಿದ್ದವು. ಆದರೀಗ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಪ್ರತೀಕಾ ಬದಲಿಗೆ ಶೆಫಾಲಿ ವರ್ಮಾ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಾಸ್ತವವಾಗಿ ಶೆಫಾಲಿ ವರ್ಮಾ ಅವರ ಕಳಪೆ ಪ್ರದರ್ಶನದಿಂದಾಗಿ ಅವರನ್ನು ವಿಶ್ವಕಪ್ ತಂಡದಿಂದ ಹೊರಗಿಡಲಾಗಿತ್ತು. ಆದಾಗ್ಯೂ, ಪ್ರತೀಕಾ ಅವರ ಗಾಯವು ಈಗ ವರದಾನವಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್ ಆರಂಭಿಸಿದ ಅನುಭವ ಹೊಂದಿರುವ ಶೆಫಾಲಿ ವರ್ಮಾ ಅವರನ್ನು ಇದೀಗ ವಿಶ್ವಕಪ್ನ ಉಳಿದ ಪಂದ್ಯಗಳಿಗೆ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಸಮಾಧಾನಕರ ಸುದ್ದಿಯೆಂದರೆ ಶೆಫಾಲಿ ವರ್ಮಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಹಿರಿಯ ಮಹಿಳಾ ಟಿ20 ಟ್ರೋಫಿಯಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ.

ಶೆಫಾಲಿ ವರ್ಮಾ ಹರಿಯಾಣ ಪರ ಎಂಟು ಪಂದ್ಯಗಳಲ್ಲಿ 56 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 341 ರನ್ ಗಳಿಸಿದ್ದಾರೆ, ಇದರಲ್ಲಿ 17 ಸಿಕ್ಸರ್‌ಗಳು ಮತ್ತು 37 ಬೌಂಡರಿಗಳು ಸೇರಿವೆ. ಅವರು 180 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ ಎರಡು ಅರ್ಧಶತಕಗಳು ಮತ್ತು ಒಂದು ಭರ್ಜರಿ ಶತಕವನ್ನು ಸಹ ಬಾರಿಸಿದ್ದಾರೆ.

ಭಾರತ ತಂಡವು ಅಕ್ಟೋಬರ್ 30 ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯವು ನವಿ ಮುಂಬೈನಲ್ಲಿ ನಡೆಯಲಿದೆ. ಆದಾಗ್ಯೂ ಪ್ರತಿಕಾ ರಾವಲ್ ಅವರಿಂದ ತೆರವಾದ ಸ್ಥಾನವನ್ನು ಶಫಾಲಿ ತುಂಬುವುದು ಕಷ್ಟಕರವಾಗಬಹುದು. ಏಕೆಂದರೆ ಮಹಿಳಾ ವಿಶ್ವಕಪ್‌ನಲ್ಲಿ ಪ್ರತಿಕಾ ಆರು ಇನ್ನಿಂಗ್ಸ್‌ಗಳಲ್ಲಿ 51.33 ಸರಾಸರಿಯಲ್ಲಿ 308 ರನ್ ಗಳಿಸಿದ್ದಾರೆ.