ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ. ಅದು ಸಹ ಪಾಕಿಸ್ತಾನ್ ತಂಡವನ್ನು ಹೀನಾಯವಾಗಿ ಬಗ್ಗು ಬಡಿಯುವ ಮೂಲಕ. ಈ ಭರ್ಜರಿ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ. ಏಕೆಂದರೆ ಬ್ಯಾಟಿಂಗ್ ಕಷ್ಟಕರವಾಗಿದ್ದ ಪಿಚ್ನಲ್ಲಿ ಕಿಂಗ್ ಕೊಹ್ಲಿ ಆಕರ್ಷಕ ಸೆಂಚುರಿ ಬಾರಿಸಿ ಮಿಂಚಿದ್ದರು.
ಆದರೆ ಈ ಶತಕ ಮೂಡಿಬಂದಿದ್ದು ಭಾರತ ತಂಡದ ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾಗೆ ಗೆಲ್ಲಲು 2 ರನ್ಗಳ ಅವಶ್ಯಕತೆಯಿದ್ದಾಗ ಬೌಂಡರಿ ಬಾರಿಸಿ ವಿರಾಟ್ ಕೊಹ್ಲಿ ತಮ್ಮ 51ನೇ ಶತಕ ಪೂರೈಸಿದ್ದರು. ಆದರೆ ಇದಕ್ಕೂ ಮುನ್ನವೇ ಕೊಹ್ಲಿಯ ಶತಕ ತಪ್ಪಿಸಲು ಪಾಕಿಸ್ತಾನ್ ಬೌಲರ್ಗಳು ಇನ್ನಿಲ್ಲದ ಪ್ರಯತ್ನ ಮಾಡಿದ್ದರು.
ಅದರಲ್ಲೂ ಪ್ರಮುಖ ವೇಗಿ ಶಾಹೀನ್ ಅಫ್ರಿದಿ 42ನೇ ಓವರ್ನಲ್ಲಿ ಸತತ ವೈಡ್ಗಳನ್ನು ಎಸೆಯುವ ಮೂಲಕ ಅಚ್ಚರಿ ಮೂಡಿಸಿದರು. 41 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 225 ರನ್ ಕಲೆಹಾಕಿತ್ತು. ಅಲ್ಲದೆ ಭಾರತ ತಂಡಕ್ಕೆ ಗೆಲ್ಲಲು ಇನ್ನೂ 17 ರನ್ಗಳ ಅವಶ್ಯಕತೆಯಿತ್ತು. ಇತ್ತ ವಿರಾಟ್ ಕೊಹ್ಲಿಗೆ ಶತಕ ಪೂರೈಸಲು 13 ರನ್ ಬೇಕಿತ್ತು.
ಈ ಹಂತದಲ್ಲಿ ದಾಳಿಗಿಳಿದ ಶಾಹೀನ್ ಅಫ್ರಿದಿ ಲಾಂಗ್ ವೈಡ್ಗಳನ್ನು ಎಸೆಯುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಅದರಂತೆ 42ನೇ ಓವರ್ನ 3ನೇ ಎಸೆತದಲ್ಲಿ ಅಚ್ಚರಿ ಎಂಬಂತೆ ವೈಡ್ ಎಸೆದರು. ಇದಾದ ಬಳಿಕ ಮತ್ತೊಂದು ವೈಡ್ ಎಸೆದರು. ಆ ಬಳಿಕ 4ನೇ ಎಸೆತದಲ್ಲಿ ಇನ್ನೊಂದು ವೈಡ್ ಎಸೆಯುವ ಮೂಲಕ ಅಚ್ಚರಿ ಮೂಡಿಸಿದರು.
ಹೀಗೆ ನಾಲ್ಕು ವೈಡ್ಗಳೊಂದಿಗೆ ಶಾಹೀನ್ ಅಫ್ರಿದಿ ಈ ಓವರ್ನಲ್ಲಿ ಒಟ್ಟು 13 ರನ್ಗಳನ್ನು ನೀಡಿದ್ದರು. ಪಾಕಿಸ್ತಾನ್ ವೇಗಿಯ ಕುತಂತ್ರದ ಹೊರತಾಗಿಯೂ ಕೊನೆಯ ಓವರ್ನಲ್ಲಿ ವಿರಾಟ್ ಕೊಹ್ಲಿಗೆ ಸ್ಟ್ರೈಕ್ ಲಭಿಸಿತು. ಖುಶ್ದಿಲ್ ಶಾ ಎಸೆದ 42ನೇ ಓವರ್ನ ಮೊದಲ ಎಸೆತದಲ್ಲಿ ಕೊಹ್ಲಿ ಒಂದು ರನ್ ಕಲೆಹಾಕಿದರು. ಮರು ಎಸೆತದಲ್ಲಿ ಅಕ್ಷರ್ ಪಟೇಲ್ ಒಂದು ರನ್ಗಳಿಸಿ ಮತ್ತೆ ಸ್ಟ್ರೈಕ್ ನೀಡಿದರು.
42ನೇ ಓವರ್ನ ಮೂರನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಆಕರ್ಷಕ ಫೋರ್ ಬಾರಿಸಿ ವಿರಾಟ್ ಕೊಹ್ಲಿ ಶತಕ ಪೂರೈಸಿದರು. ಅತ್ತ ಕಿಂಗ್ ಕೊಹ್ಲಿಯ ಶತಕ ತಪ್ಪಿಸಲು ಯತ್ನಿಸಿದ್ದ ಶಾಹೀನ್ ಅಫ್ರಿದಿ ಪೆಚ್ಚು ಮೊರೆಯೊಂದಿಗೆ ಬಂದು ವಿರಾಟ್ ಕೊಹ್ಲಿಯ ಕೈ ಕುಲುಕಿದರು.