
ಶ್ರೀಲಂಕಾದ ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ಮೂಲಕ ಪಾಕಿಸ್ತಾನ್ ವೇಗಿ ಶಾಹೀನ್ ಅಫ್ರಿದಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ದಿಗ್ಗಜರನ್ನು ಬೌಲ್ಡ್ ಮಾಡುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಶಾಹೀನ್ ಅಫ್ರಿದಿ ಮೊದಲ ಆಘಾತ ನೀಡಿದ್ದರು. 11 ರನ್ಗಳಿಸಿದ್ದ ರೋಹಿತ್ ಶರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಅಫ್ರಿದಿ ಪಾಕ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು.

ಇದಾದ ಬಳಿಕ ಕಣಕ್ಕಿಳಿದ ವಿರಾಟ್ ಕೊಹ್ಲಿ (4) ಶಾಹೀನ್ ಅಫ್ರಿದಿ ಎಸೆತದಲ್ಲಿ ಇನ್ ಸೈಡ್ ಎಡ್ಜ್ ಆಗಿ ಬೌಲ್ಡ್ ಆದರು. ಈ ಎರಡು ವಿಕೆಟ್ಗಳೊಂದಿಗೆ ಶಾಹೀನ್ ವಿಶೇಷ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡರು.

ಹೌದು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಒಂದೇ ಪಂದ್ಯದಲ್ಲೇ ಬೌಲ್ಡ್ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಶಾಹೀನ್ ಅಫ್ರಿದಿ ಪಾತ್ರರಾಗಿದ್ದಾರೆ.

ಅಂದರೆ ಇದುವರೆಗೆ ಯಾವುದೇ ಬೌಲರ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನು ಒಂದೇ ಪಂದ್ಯದಲ್ಲಿ ಬೌಲ್ಡ್ ಮಾಡಿ ಔಟ್ ಮಾಡಿಲ್ಲ. ಇದೀಗ ಏಷ್ಯಾಕಪ್ನಲ್ಲಿ ಈ ಸಾಧನೆ ಮಾಡುವ ಮೂಲಕ ಶಾಹೀನ್ ಅಫ್ರಿದಿ ದಾಖಲೆ ಬರೆದಿರುವುದು ವಿಶೇಷ.

ಇನ್ನು ಈ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ಒಟ್ಟು 10 ಓವರ್ಗಳಲ್ಲಿ ಕೇವಲ 35 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಇಲ್ಲಿ ಶಾಹೀನ್ ದಾಳಿಗೆ ವಿಕೆಟ್ ಒಪ್ಪಿಸಿದ್ದು ರೋಹಿತ್ ಶರ್ಮಾ (11), ವಿರಾಟ್ ಕೊಹ್ಲಿ (4), ಹಾರ್ದಿಕ್ ಪಾಂಡ್ಯ (87) ಹಾಗೂ ರವೀಂದ್ರ ಜಡೇಜಾ (14).