
ಟೀಮ್ ಇಂಡಿಯಾದ ಆಲ್ರೌಂಡರ್ ಶಾರ್ದೂಲ್ ಠಾಕೂರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಫೆಬ್ರವರಿ 27ರಂದು ನಡೆಯಲಿರುವ ಶುಭ ಸಮಾರಂಭದಲ್ಲಿ ಶಾರ್ದೂಲ್ ಬಹುಕಾಲದ ಗೆಳತಿ ಮಿತಾಲಿ ಪರುಲ್ಕರ್ ಅವರನ್ನು ವರಿಸಲಿದ್ದಾರೆ.

ಮದುವೆಗೂ ಮುಂಚಿತವಾಗಿ ನಡೆಯುವ ಅರಿಶಿಣ ಶಾಸ್ತ್ರದಲ್ಲಿ ಶಾರ್ದೂಲ್ ಠಾಕೂರ್ ಕುಟುಂಬಸ್ಥರು ಮತ್ತು ಸ್ನೇಹಿತರು ಕಾಣಿಸಿಕೊಂಡಿದ್ದರು. ಇದೀಗ ಈ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಚಿತ್ರದಲ್ಲಿ ಕುರ್ತಾ ಧರಿಸಿರುವ ಶಾರ್ದೂಲ್ ಠಾಕೂರ್ ಮತ್ತು ಮೆಹಂದಿಯೊಂದಿಗೆ ಮಿಂಚುತ್ತಿರುವ ನವ ವಧು ಮಿತಾಲಿ ಪಾರುಲ್ಕರ್ ಅವರನ್ನು ಕಾಣಬಹುದು.

ಶಾರ್ದೂಲ್ ಅವರ ವಿವಾಹ ಕಾರ್ಯಕ್ರಮಗಳು ಮುಂಬೈನಲ್ಲಿ ನಡೆಯುತ್ತಿದ್ದು, ಕೆಲವೇ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಈ ಶುಭ ಮುಹೂರ್ತದ ವೇಳೆ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಅರಿಶಿಣ ಶಾಸ್ತ್ರದ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಕೂಡ ಭಾಗವಹಿಸಿದ್ದರು. ವಿಶೇಷ ಎಂದರೆ ಈ ಬಾರಿಯ ಐಪಿಎಲ್ನಲ್ಲಿ ಶಾರ್ದೂಲ್, ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2021 ರಲ್ಲಿ ಬಹುಕಾಲದ ಗೆಳತಿ ಮಿತಾಲಿ ಪಾರುಲ್ಕರ್ ಜೊತೆ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಹಿರಿಯರು ನಿಶ್ಚಿಯಿಸಿದಂತೆ ಫೆಬ್ರವರಿ 27 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮಿತಾಲಿ ಪಾರುಲ್ಕರ್ ಉದ್ಯಮಿಯಾಗಿದ್ದು, ದಿ ಬೇಕ್ಸ್ ಎಂಬ ಸಂಸ್ಥೆಯ ಸ್ಥಾಪಕಿ. ಬೇಕರಿ ತಿನಿಸುಗಳ ಉದ್ಯಮವನ್ನು ಹೊಂದಿರುವ ಮಿತಾಲಿ ಆಲ್ ದಿ ಜಾಝ್ - ಐಷಾರಾಮಿ ಬೇಕರ್ಸ್ ಸಂಸ್ಥೆಯ ಮೂಲಕ ಮುಂಬೈನಾದ್ಯಂತ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.

ಇದೀಗ ತಮ್ಮ ಬಹುಕಾಲದ ಗೆಳೆಯ ಶಾರ್ದೂಲ್ ಠಾಕೂರ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಅದರಂತೆ ಸೋಮವಾರ ನಡೆಯಲಿರುವ ಶುಭ ಮುಹೂರ್ತದ ಮೂಲಕ ಮಿತಾಲಿ ಅವರನ್ನು ಶಾರ್ದೂಲ್ ವರಿಸಲಿದ್ದಾರೆ.

ಸದ್ಯ ಟೀಮ್ ಇಂಡಿಯಾ ಟೆಸ್ಟ್ ತಂಡದಿಂದ ಹೊರಗುಳಿದಿರುವ ಶಾರ್ದೂಲ್ ಠಾಕೂರ್, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆಗೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.