ಇಂದು ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟಿ20 ಪಂದ್ಯ ನಡೆಯಲಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಈಗಾಗಲೇ 2-1 ಅಂತರದಿಂದ ಮುನ್ನಡೆ ಪಡೆಕೊಂಡಿದ್ದು, ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.
ಕಾಂಗರೂ ಪಡೆಗೆ ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದ ಎರಡೂ ಪಂದ್ಯ ಗೆಲ್ಲಲೇ ಬೇಕಿದೆ. ಕಳೆದ ಪಂದ್ಯದಲ್ಲಿ ಭಾರತ 200+ ರನ್ ಕಲೆಹಾಕಿದರೂ ಸೋಲುಂಡಿತ್ತು. ಹೀಗಾಗಿ ಟೀಮ್ ಇಂಡಿಯಾ ಯೋಜನೆ ರೂಪಿಸಿ ಕಣಕ್ಕಿಳಿಯಬೇಕಿದೆ. ಹೀಗೆ ಅನೇಕ ಕಾರಣಗಳಿಂದ ಉಭಯ ತಂಡಗಳ ಇಂದಿನ ಕಾದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಎರಡು ಬದಲಾವಣೆ ಖಚಿತ. ಉಪನಾಯಕ ಶ್ರೇಯಸ್ ಅಯ್ಯರ್ ಆಗಮನದಿಂದ ಮೆನ್ ಇನ್ ಬ್ಲೂ ಬ್ಯಾಟಿಂಗ್ ಬಲ ಹೆಚ್ಚಿದೆ. ಹೀಗಾಗಿ ತಿಲಕ್ ವರ್ಮ ತನ್ನ ಸ್ಥಾನವನ್ನು ಹಿರಿಯ ಬ್ಯಾಟರ್‌ಗೆ ಬಿಟ್ಟುಕೊಡಬೇಕಾಗುತ್ತದೆ.
ಪ್ರಸಿದ್ಧ್ ಕೃಷ್ಣ ಕಳೆದ ಮೂರೂ ಪಂದ್ಯಗಳಲ್ಲಿ ಸಾಕಷ್ಟು ದುಬಾರಿ ಆಗಿದ್ದಾರೆ. ಹೀಗಾಗಿ ಇವರ ಬದಲು ದೀಪಕ್ ಚಹರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಉಳಿದಂತೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ. ಹಿಂದಿನ ಪಂದ್ಯದಲ್ಲಿ ಆಡಿದ ಆಟಗಾರರೇ ಇಂದುಕೂಡ ಕಾಣಿಸಿಕೊಳ್ಳಲಿದ್ದಾರೆ.
ಪ್ರಸ್ತುತ, ರಿಂಕು ಸಿಂಗ್ ಹೊಸ ಫಿನಿಶರ್ ಆಗಿ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಭಾರತಕ್ಕೆ ಸ್ಫೋಟಕ ಆರಂಭಿಕರಾಗಿದ್ದಾರೆ. ಇವರು ಇಂದು ಕೂಡ ಪ್ರಮುಖ ಪಾತ್ರವಹಿಸಲಿದ್ದಾರೆ.
ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ನಾಯಕ ಆಟ ಆಡುತ್ತಿದ್ದಾರೆ. ಆಲ್ರೌಂಡರ್ ಅಕ್ಷರ್ ಪಟೇಲ್ ಕಡೆಯಿಂದ ನಿರೀಕ್ಷೆಗೆ ತಕ್ಕಂತ ಆಡ ಬರುತ್ತಿಲ್ಲ. ರವಿ ಬಿಷ್ಟೋಯಿ ಸ್ಪಿನ್ ಜಾದು ಚೆನ್ನಾಗಿ ಕೆಲಸ ಮಾಡುತ್ತಿದೆ. ಭಾರತದ ವೇಗಿಗಳು ಇನ್ನಷ್ಟು ಮಾರಕವಾಗಬೇಕಿದೆ.
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್-ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಅಕ್ಷರ್ ಪಟೇಲ್, ದೀಪಕ್ ಚಹಾರ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್.