ಒಂದು ಸಮಯದಲ್ಲಿ ತನ್ನ ಕಳಪೆ ಫಾರ್ಮ್ ಹಾಗೂ ಅಹಂಕಾರದಿಂದಾಗಿ ಟೀಂ ಇಂಡಿಯಾದಿಂದಲೇ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್ಗೆ ಇದೀಗ ಮುಟ್ಟಿದೆಲ್ಲ ಚಿನ್ನವಾಗುತ್ತಿದೆ. ಈ ಮೊದಲು ಐಪಿಎಲ್ ಹರಾಜಿನಲ್ಲಿ 26.75 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಪಡೆದಿದ್ದ ಅಯ್ಯರ್, ನಂತರ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆ ಬಳಿಕ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದಿದ್ದ ಅಯ್ಯರ್, ಚಾಂಪಿಯನ್ಸ್ ಟ್ರೋಫಿಯಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದರು.
ಇದೀಗ ಇದೆಲ್ಲದರ ನಡುವೆ ಶ್ರೇಯಸ್ ಅಯ್ಯರ್ಗೆ ಮತ್ತೊಂದು ಒಳ್ಳೆಯ ಸುದ್ದಿ ಸಿಗಲಿದೆ. ಶ್ರೇಯಸ್ ಅಯ್ಯರ್ ಮತ್ತೆ ಬಿಸಿಸಿಐನ ಕೇಂದ್ರ ಒಪ್ಪಂದವನ್ನು ಪಡೆಯಲಿದ್ದಾರೆ ಎಂಬ ಸುದ್ದಿ ಇದೆ. ಕಳೆದ ವರ್ಷ ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿತ್ತು. ಆದರೆ ಈಗ ಅವರನ್ನು ಎ ಗ್ರೇಡ್‌ಗೆ ಸೇರಿಸಬಹುದು ಎನ್ನಲಾಗುತ್ತಿದ್ದು, ಒಂದು ವೇಳೆ ಇದು ನಿಜವಾದರೆ, ಅಯ್ಯರ್ಗೆ ವಾರ್ಷಿಕವಾಗಿ 5 ಕೋಟಿ ರೂ. ವೇತನ ಸಿಗಲಿದೆ.
ಮೇಲೆ ಹೇಳಿದಂತೆ ದೇಶೀ ಕ್ರಿಕೆಟ್‌ನಲ್ಲಿ ಅಬ್ಬರಿಸಿ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದ ಶ್ರೇಯಸ್ ಅಯ್ಯರ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಿದ್ದರು. ಅಲ್ಲದೆ ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದ ಆಟಗಾರ ಎನಿಸಿಕೊಂಡಿದ್ದರು. ಈಗ ಬಿಸಿಸಿಐ ಅವರ ಕಠಿಣ ಪರಿಶ್ರಮಕ್ಕೆ ಪ್ರತಿಫಲ ನೀಡಲಿದೆ.
ಆದಾಗ್ಯೂ, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮತ್ತು ಇತ್ತೀಚೆಗೆ ಐಪಿಎಲ್ 2025 ರಲ್ಲಿ ಎಸ್‌ಆರ್‌ಹೆಚ್ ಪರ ಶತಕ ಸಿಡಿಸಿರುವ ಇಶಾನ್ ಕಿಶನ್ ಅವರಿಗೆ ಕೇಂದ್ರ ಒಪ್ಪಂದ ಸಿಗುವುದಿಲ್ಲ ಎಂದು ವರದಿ ಬಹಿರಂಗಪಡಿಸಿದೆ. ತಾಂತ್ರಿಕ ಕಾರಣಗಳಿಂದಾಗಿ ಈ ಆಟಗಾರನಿಗೆ ಕೇಂದ್ರ ಒಪ್ಪಂದವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಬಿಸಿಸಿಐ ನಿಯಮಗಳ ಪ್ರಕಾರ, ಕೇಂದ್ರ ಒಪ್ಪಂದ ಪಡೆಯಲು, ಆಟಗಾರನೊಬ್ಬ ಕ್ಯಾಲೆಂಡರ್ ವರ್ಷದಲ್ಲಿ ಮೂರು ಟೆಸ್ಟ್, ಎಂಟು ಏಕದಿನ ಅಥವಾ ಹತ್ತು ಟಿ20 ಪಂದ್ಯಗಳನ್ನು ಆಡಬೇಕು. ಆದರೆ ಕಿಶನ್ ಈ ಕ್ಯಾಲೆಂಡರ್ ವರ್ಷದಲ್ಲಿ ಯಾವ ಮಾದರಿಯಲ್ಲೂ ಪಂದ್ಯಗಳನ್ನಾಡಿಲ್ಲ.
ಇದಲ್ಲದೆ, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಜೇಯ ಓಟದಲ್ಲಿ ಮಹತ್ವದ ಕೊಡುಗೆ ನೀಡಿರುವ ಆಲ್‌ರೌಂಡರ್ ಅಕ್ಷರ್ ಪಟೇಲ್ ಕೂಡ ಬಡ್ತಿ ಪಡೆಯಲಿದ್ದಾರೆ. ಇದಲ್ಲದೆ, ಕಳೆದ ಒಂದು ವರ್ಷದಲ್ಲಿ ಭಾರತ ಪರ ವಿವಿಧ ಸ್ವರೂಪಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ ಮತ್ತು ಅಭಿಷೇಕ್ ಶರ್ಮಾ ಅವರಿಗೂ ಸಹ ಮೊದಲ ಕೇಂದ್ರ ಒಪ್ಪಂದ ಸಿಗುವ ಉತ್ತಮ ಅವಕಾಶವಿದೆ.
ಇವರ ಹೊರತಾಗಿ ತಂಡದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ. ಆದರೆ ಇದರ ಹೊರತಾಗಿಯೂ, ಇಬ್ಬರೂ ಎ+ ದರ್ಜೆಯ ಕೇಂದ್ರ ಒಪ್ಪಂದವನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಇದು ನಿಜವಾದರೆ ಇಬ್ಬರೂ ವಾರ್ಷಿಕವಾಗಿ 7 ಕೋಟಿ ರೂ.ಗಳನ್ನು ವೇತನವಾಗಿ ಪಡೆಯಲಿದ್ದಾರೆ.