
ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ವರದಿಗಳ ಪ್ರಕಾರ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡುವ ಸಾಧ್ಯತೆ ಕಡಿಮೆ. ಶ್ರೇಯಸ್ ಅಯ್ಯರ್ ಪ್ರಸ್ತುತ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ. ಆದರೆ ಅವರು ತಂಡಕ್ಕೆ ಮರಳುವ ದಿನಾಂಕವನ್ನು ಮುಂದೂಡಲಾಗಿದೆ.

31 ವರ್ಷದ ಅಯ್ಯರ್ ಡಿಸೆಂಬರ್ 28 ರಂದು ನಡೆದ ರಿಟರ್ನ್-ಟು-ಪ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ ಈಗ ಅವರ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ, ಅವರ ದೇಹವು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಸೆಂಟರ್ ಆಫ್ ಎಕ್ಸಲೆನ್ಸ್‌ನ ವೈದ್ಯಕೀಯ ತಂಡವು ಶ್ರೇಯಸ್ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂಬುದನ್ನು ತಮ್ಮ ತಪಾಸಣೆಯಲ್ಲಿ ಕಂಡುಕೊಂಡಿದೆ.

ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್‌ನಲ್ಲಿ ಸಮಸ್ಯೆಯಿಲ್ಲ. ಆದರೆ ಅವರ ಸ್ನಾಯುವಿನ ದ್ರವ್ಯರಾಶಿ ಈಗಾಗಲೇ ಕಡಿಮೆಯಾಗಿದೆ ಎಂದು ಸೆಂಟರ್ ಆಫ್ ಎಕ್ಸಲೆನ್ಸ್‌ನ ವರದಿಯಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಅವರ ಬ್ಯಾಟಿಂಗ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ, ಆದರೆ ಆಸ್ಟ್ರೇಲಿಯಾದಲ್ಲಿ ಗಾಯಗೊಂಡ ನಂತರ ಅವರು ಸುಮಾರು 6 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ .

ಇದೀಗ ಶ್ರೇಸಯ್ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದರೂ, ಅವರ ಸ್ನಾಯುವಿನ ದ್ರವ್ಯರಾಶಿ ಕಡಿಮೆಯಾಗಿದೆ, ಇದು ಅವರ ಬಲದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ವೈದ್ಯಕೀಯ ತಂಡವು ಅಯ್ಯರ್ ಅವರೊಂದಿಗೆ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಏಕೆಂದರೆ ಅವರು ಏಕದಿನ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದಾರೆ.

ಹೀಗಾಗಿ ಈ ಸಮಯದಲ್ಲಿ ಅವರ ಸಂಪೂರ್ಣ ಚೇತರಿಕೆ ಅತ್ಯಂತ ಮುಖ್ಯವಾಗಿದೆ. ಆದಾಗ್ಯೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಮೊದಲು ಅವರ ಪ್ರಸ್ತುತ ಸ್ಥಿತಿಯ ಬಗ್ಗೆ ಆಯ್ಕೆದಾರರು ಮತ್ತು ತಂಡದ ನಿರ್ವಹಣೆಗೆ ತಿಳಿಸಲಾಗುವುದು ಎಂದು ವರದಿಯಾಗಿದೆ.

ಶ್ರೇಯಸ್ ಸಂಪೂರ್ಣ ಫಿಟ್ ಆಗಿರದಿದ್ದರೆ, ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡುವುದಿಲ್ಲ. ಫೆಬ್ರವರಿ 3 ಮತ್ತು 6 ರಂದು ಅಯ್ಯರ್ ಮುಂಬೈ ಪರ ಲೀಗ್ ಪಂದ್ಯಗಳನ್ನು ಆಡಬಹುದು ಎಂದು ವರದಿಯಾಗಿತ್ತು. ಆದರೆ ಈಗ ಶ್ರೇಯಸ್ ಆಡುವುದು ಅನುಮಾನವಾಗಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಪ್ರಾರಂಭವಾಗುವ ಕೇವಲ ಎರಡು ದಿನಗಳ ಮೊದಲು, ಜನವರಿ 9 ರೊಳಗೆ ಶ್ರೇಯಸ್ ಫಿಟ್ನೆಸ್ ಕ್ಲಿಯರೆನ್ಸ್ ಪಡೆಯುವ ನಿರೀಕ್ಷೆಯಿದೆ. ಈಗ, ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡದಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅದ್ಭುತ ಶತಕ ಬಾರಿಸಿದ್ದ ರುತುರಾಜ್ ಗಾಯಕ್ವಾಡ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ.