
ತನ್ನ ನಾಯಕತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದ ಶ್ರೇಯಸ್ ಅಯ್ಯರ್, ಈ ಬಾರಿ ಹೊಸ ತಂಡದ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಅಂತಿಮವಾಗಿ ಶ್ರೇಯಸ್ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ.

2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಅಯ್ಯರ್ ಅವರನ್ನು ಖರೀದಿಸಲು ಆರಂಭದಿಂದಲೂ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ನಡೆಯಿತು. ಈ ಎರಡು ಫ್ರಾಂಚೈಸಿಗಳನ್ನು ಬಿಟ್ಟು ಬೇರೆ ಫ್ರಾಂಚೈಸಿಗಳಿಗೆ ಅವಕಾಶವೆ ಸಿಗಲಿಲ್ಲ. ಅಂತಿಮವಾಗಿ ಶ್ರೇಯಸ್, ಬರೋಬ್ಬರಿ 26.75 ಕೋಟಿ ರೂ.ಗೆ ಪಂಜಾಬ್ ಪಾಲಾದರು.

ವಾಸ್ತವವಾಗಿ ಹರಾಜಿಗೂ ಮೊದಲು ಶ್ರೇಯಸ್ ಅಯ್ಯರ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾತಿತ್ತು. ಅದರಂತೆ ಡೆಲ್ಲಿ ಕೂಡ ಅಯ್ಯರ್ಗಾಗಿ ಪ್ರಯತ್ನ ಮಾಡಿತು. ಆದರೆ ಸಫಲವಾಗಲಿಲ್ಲ. ಶ್ರೇಯಸ್ ಪಂಜಾಬ್ ಸೇರಲು ಕಾರಣವೂ ಇದ್ದು, ಈ ಹಿಂದೆ ಡೆಲ್ಲಿ ತಂಡದ ಕೋಚ್ ಆಗಿದ್ದ ರಿಕಿ ಪಾಂಟಿಂಗ್, ಈ ಬಾರಿ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಈ ಮೊದಲು ಶ್ರೇಯಸ್ ಜೊತೆ ಕೆಲಸ ಮಾಡಿದ್ದ ಪಾಂಟಿಂಗ್, ಪಂಜಾಬ್ನಲ್ಲೂ ಅದೇ ಕೆಲಸವನ್ನು ಮುಂದುವರೆಸಲಿದ್ದಾರೆ.

ಶ್ರೇಯಸ್ ಅಯ್ಯರ್ ಇದುವರೆಗೆ ಐಪಿಎಲ್‌ನಲ್ಲಿ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಅಯ್ಯರ್ ತಮ್ಮ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಚಾಂಪಿಯನ್ ಮಾಡುವುದರ ಜೊತೆಗೆ, ದೆಹಲಿ ತಂಡವನ್ನು ಒಮ್ಮೆ ಫೈನಲ್‌ಗೆ ಕೊಂಡೊಯ್ದಿದ್ದಾರೆ. ಅಂದರೆ ಒತ್ತಡದ ನಡುವೆಯೂ ತಂಡವನ್ನು ಹೇಗೆ ನಡೆಸಬೇಕೆಂಬ ಕಲೆ ಅಯ್ಯರ್ಗೆ ಚೆನ್ನಾಗಿ ತಿಳಿದಿದೆ.

ಇದಲ್ಲದೇ ಅಯ್ಯರ್ ಬ್ಯಾಟ್ಸ್ಮನ್ ಆಗಿಯೂ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಇದುವರೆಗೆ ಒಟ್ಟು 115 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 32.24ರ ಸರಾಸರಿಯಲ್ಲಿ 3127 ರನ್ ಗಳಿಸಿದ್ದಾರೆ. ಇದರಲ್ಲಿ 21 ಅರ್ಧಶತಕಗಳು ಸೇರಿವೆ.