Virat Kohli: ಕಿಂಗ್ ಈಸ್ ಬ್ಯಾಕ್: ಸ್ಪೋಟಕ ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ
Virat Kohli: ಪರ್ತ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಹೊಸ ಮೈಲುಗಲ್ಲು ದಾಟಿದ್ದಾರೆ. ಈ ಶತಕದೊಂದಿಗೆ ಕಿಂಗ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2 ಸಾವಿರ ರನ್ ಪೂರೈಸಿದ 7ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
Updated on:Nov 24, 2024 | 2:53 PM

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಅಬ್ಬರಿಸಿದ್ದಾರೆ. ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದ್ದಾರೆ.

ಇದು ವಿರಾಟ್ ಕೊಹ್ಲಿಯ ಬ್ಯಾಟ್ನಿಂದ ವರ್ಷಗಳ ಬಳಿಕ ಮೂಡಿಬರುತ್ತಿರುವ ಟೆಸ್ಟ್ ಶತಕ ಎಂಬುದು ವಿಶೇಷ. ಅಂದರೆ 2023ರ ಜುಲೈ 21ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಶತಕ ಬಾರಿಸಿದ್ದರು. ಇದಾದ ಬಳಿಕ ಅವರು ಮೂರಂಕಿ ಮೊತ್ತ ಕಲೆಹಾಕಿರಲಿಲ್ಲ.

ಇದೀಗ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಸೀಸ್ ಪಿಚ್ನಲ್ಲೇ ಅಬ್ಬರಿಸುವ ಮೂಲಕ ಮೂರನೇ ಟೆಸ್ಟ್ ಕೆರಿಯರ್ನ 30ನೇ ಶತಕ ಪೂರೈಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಮೂವತ್ತು ಸೆಂಚುರಿ ಸಿಡಿಸಿದ ವಿಶ್ವದ 16ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಈ ಶತಕದೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲೂ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 9 ಶತಕಗಳೊಂದಿಗೆ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧ 9ನೇ ಟೆಸ್ಟ್ ಸೆಂಚುರಿ ಸಿಡಿಸಿ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ವಿರಾಟ್ ಕೊಹ್ಲಿಯ ಈ ಭರ್ಜರಿ ಶತಕದೊಂದಿಗೆ ಟೀಮ್ ಇಂಡಿಯಾ 6 ವಿಕೆಟ್ ಕಳೆದುಕೊಂಡು 487 ರನ್ಗಳಿಸಿ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಘೋಷಿಸಿದೆ. ಅತ್ತ ಮೊದಲ ಇನಿಂಗ್ಸ್ನಲ್ಲಿ 46 ರನ್ಗಳ ಹಿನ್ನಡೆ ಹೊಂದಿದ್ದ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಗೆಲ್ಲಲು 534 ರನ್ ಕಲೆಹಾಕಬೇಕಿದೆ.
Published On - 2:45 pm, Sun, 24 November 24
